Pages

Tuesday, December 14, 2010

ಜೋಯಿಡಾ ಪ್ರದೇಶಿಕ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

ಉತ್ತರ ಕನ್ನಡ ಜಿಲ್ಲೆಯ ಉತ್ತರಕ್ಕಿರುವ ಜೋಯಿಡಾ ತಾಲ್ಲೂಕು ರಾಜ್ಯದ ಗಡಿನಾಡು ತಾಲ್ಲೂಕುಗಳಲ್ಲಿ ಒಂದಾಗಿದೆ. ತಾಲ್ಲೂಕಿನ ಉತ್ತರಕ್ಕೆ ಮತ್ತು ಪಶ್ಚಿಮಕ್ಕೆ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಇರುವ ಪಶ್ಚಿಮಘಟ್ಟದ ಮೇಲ್ಭಾಗದ ತಾಲ್ಲೂಕಾಗಿರುವ ಜೋಯಿಡಾ ಅಪಾರವಾದ ಪ್ರಾಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಪ್ರದೇಶವಾಗಿದ್ದು, ವಿಸ್ತಾರದಲ್ಲಿ ರಾಜ್ಯದ ಎರಡನೇ ಅತೀ ದೊಡ್ಡ ತಾಲ್ಲೂಕ್ (೧೮೮೦ ಚ.ಕಿ.ಮೀ). ಜೋಯಿಡಾ ತಾಲ್ಲೂಕಿನ ಕೇಂದ್ರ ಸ್ಥಾನವಾಗಿದ್ದ ’ಸೂಪಾ’ ಇಂದು ಸೂಪಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಜೋಯಿಡಾ ಈಗಿನ ತಾಲ್ಲೂಕ್ ಕೇಂದ್ರವಾಗಿದೆ. ತಾಲ್ಲೂಕ್ ಕೇಂದ್ರವಾಗಿರುವ ಜೋಯಿಡಾ ಇಂದು ಸಹ ಗ್ರಾಮ ಪಂಚಾಯ್ತಿಯ ಕೇಂದ್ರವಾಗಿಯೇ ಮುಂದುವರಿದಿದೆ. ಭೂಭಾಗದ ಶೇಕಡಾ ೮೭% ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿರುವ ಅರಣ್ಯದ ತಾಲ್ಲೂಕ್ ಎಂದೆ ಪ್ರಖ್ಯಾತವಾಗಿರುವ ಪ್ರದೇಶವಾಗಿದೆ. ರಾಜ್ಯದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳವು ವಿಶ್ವದ ೧೮ ಜೀವ ವೈವಿಧ್ಯತಾ ತಾಣಗಳಲ್ಲಿ ಒಂದಾಗಿದ್ದು, ಅತೀ ಮನಮೋಹಕ ಜಲಧಾರೆ (ವಾಟರ್ ಫಾಲ್ಸ್) ಗಳನ್ನು ಹೊಂದಿದ್ದು ಸುಂದರವಾದ ಮನಮೋಹಕ ಪ್ರಾಕೃತಿಕ ಸೊಬಗನ್ನು ಹಾಗೂ ಅನೇಕ ಅತೀ ಮಹತ್ವದ ವನ್ಯಜೀವಿಗಳಿಂದ ಮತ್ತು ಸಸ್ಯ ರಾಶಿಗಳಿಂದ ಕೂಡಿರುವ ಪ್ರಾಕೃತಿಕ ಖಣಜವೆನಿಸಿದೆ. ಇಂತಹ ಪ್ರದೇಶದಲ್ಲಿ ಅಭಿವೃದ್ದಿ ಹಾಗೂ ಪರಿಸರ ಸಂರಕ್ಷಣೆ (ಅರಣ್ಯ) ಜೊತೆಗೂಡಿ ಸಾಗಬೇಕಿದೆ.

ಕೃಷಿ ಕ್ಷೇತ್ರದಲ್ಲಿ ’ಭತ್ತದ ಖಣಜವೆಂದು’ ಹೆಸರುವಾಸಿಯಾಗಿದ್ದ ಸೂಪಾ ತಾಲ್ಲೂಕು ಇಂದು ಅಣೆಕಟ್ಟೆಯ ನಿರ್ಮಾಣದೊಂದಿಗೆ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಆದರೂ ಸಹ ಇಲ್ಲಿಯ ಜನರ ಬದುಕಿಗೆ ಆಸರೆಯಾಗಿರುವುದು ಭತ್ತದ ಕೃಶಿ, ಕಡಿಮೆ ಜನಸಂಖ್ಯೆ ವಿರಳವಾಗಿರುವ   ಗ್ರಾಮಗಳು ಮತ್ತು ಮಜರೆಗಳು ಹಾಗೂ ಇಲ್ಲಿರುವ ಕುಣಬಿ, ಗೌಳಿ, ಸಿದ್ದಿ ಜನಾಂಗದವರು ತಮ್ಮ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಅರಣ್ಯ ಮಧ್ಯದಲ್ಲಿ ಅಲ್ಲಲ್ಲೇ, ಕಂಡುಬರುವ ಕೃಶಿ ಭೂಮಿಯಲ್ಲಿ ಬೆಳೆದ ಭತ್ತ ಸುವಾಸನೆ ಭರಿತವಾಗಿದ್ದು, ರಾಸಾಯನಿಕ ಗೊಬ್ಬರವನ್ನು ಬಳಸದೇ ಬೆಳೆಯುವ ಸಾವಯವ ಕೃಷಿ ಬೆಳೆಯಲಾಗಿರುತ್ತದೆ. ಹಿಂದೆ ಅರಣ್ಯದ ಮಧ್ಯದಲ್ಲಿ ಕುಮರಿ ಬೇಸಾಯ ಪದ್ದತಿಯಿಂದ ರಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ಈ ಪದ್ದತಿಯು ರೂಢಿಯಲ್ಲಿರುವುದಿಲ್ಲ. ಇರುವ ಅಲ್ಪ ಸ್ವಲ್ಪ ಕೃಷಿ ಭೂಮಿಯಲ್ಲಿ ಭತ್ತದ ಬೆಳೆಯೊಂದಿಗೆ ತೋಟದ ಬೆಳೆಗಳಾದ  ಬಾಳೆ, ಕಾಳು ಮೆಣಸು ವಿವಿಧ ಬಗೆಯ ತರಕಾರಿ, ಹೂ, ಹಣ್ಣುಗಳನ್ನು ಮಳೆಗಾಲದಲ್ಲಿ ಜೀವನ ಸಾಗಿಸಲು ಬೆಳೆಯುತ್ತಾರೆ. ಇವೆಲ್ಲವೂ ಒಂದು ರೀತಿಯ ಸಾವಯವ ಕೃಷಿಗೆ ಪೂರಕವಾಗಿದ್ದು ಮಾಲಿನ್ಯ ಯುಗದಲ್ಲಿ ಸಾವಯವ ಕೃಷಿ ಉತ್ಪಾದನೆ ಹೆಚ್ಚು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. ಇದು ಜನರ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿಸಲು ಸಹಕಾರಿಯಾಗಬಲ್ಲದು.

ಜೋಯಿಡಾ ತಾಲ್ಲೂಕ ವಿಸ್ತಾರದಲ್ಲಿ ಅತೀ ದೊಡ್ಡ ತಾಲ್ಲೂಕಾಗಿದ್ದರೂ, ಭೂ ಭಾಗದ ಹೆಚ್ಚಿನ ಪ್ರದೇಶ ಅರಣ್ಯದಿಂದ ಆವೃತವಾಗಿದ್ದು, ಗ್ರಾಮಗಳು ಚದುರಿದಂತೆ ದೂರ ದೂರದಲ್ಲಿರುವುದು ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವುದರಿಂದ ಮೂಲಭೂತ ಸೌಕರ್ಯ ಕಲ್ಪಿಸುವುದು ಅಷ್ಟು ಸುಲಭದ ಕೆಲಸವಾಗಿರುವುದಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣದ ಹಂಚಿಕೆಯಾಗುವುದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟದಾಯಕವಾಗಿರುತ್ತದೆ. ಈ ಪ್ರದೇಶದಲ್ಲಿ ಅಭಿವೃದ್ದಿ ಕೆಲಸಗಳನ್ನು ಹಮ್ಮಿಕೊಳ್ಳಲು ಈಗಿರುವ ಮಾನದಂಡಗಳನ್ನು ಸಡಿಲಗೊಳಿಸಿ, ಬೇರೆಡೆ ಅನ್ವಯವಾಗುವ ಮಾನದಂಡಗಳಿಂದ ವಿನಾಯಿತಿ ನೀಡಿದಲ್ಲಿ ಮಾತ್ರ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಾಗಬಹುದು. ಆದ್ದರಿಂದ ಇಂದೂ ಸಹ ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ, ಅರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿರುವುದಿಲ್ಲ. ಈ ಪ್ರದೇಶದಲ್ಲಿ ದಟ್ಟವಾದ ಅಡವಿಯಿರುವುದರಿಂದ ನೀರಿನ ಸಮಸ್ಯೆ ತಲೆದೋರಿರುವುದಿಲ್ಲ. ಇತ್ತೀಚೆಗೆ ಜಲ ನಿರ್ಮಲ ಯೋಜನೆ ಮತ್ತು ಇತರೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಝರಿ ನೀರಿನ ಸಂಪರ್ಕವನ್ನು ಪೂರೈಸುವ ಕೆಲಸವಾಗಿರುತ್ತದೆ. ಇಲ್ಲಿ ಹಿಂದಿನಿಂದಲೂ ಅರಣ್ಯದಲ್ಲಿಯ ಝರಿ ನೀರನ್ನು ಬಳಸುವ ಪದ್ದತಿ ರೂಢಿಯಲ್ಲಿರುವುದರಿಂದ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿರುವುದಲ್ಲ.

ಈ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಮೊದಲು ಸರ್ವಋತು ಕಡಿ ರಸ್ತೆಗಳ ಅವಶ್ಯಕತೆಯಿದೆ, ಇದರ ಜೊತೆಗೆ ಮಳೆಗಾಲದಲ್ಲಿ ಹಳ್ಳ ಮತ್ತು ಹೊಳೆಗಳನ್ನು ದಾಟಲು ಕಾಲು ಸಂಕದ (ಫ಼ುಟ್ ಬ್ರಿಡ್ಜ್) ಅವಶ್ಯಕತೆ ಸಹ ಬಹಳವಾಗಿದೆ. ಮೊದಲು ಇಲ್ಲಿಯ ರಸ್ತೆಗಳಲ್ಲಿ ವಾಹನಗಳು ಓಡಾಡುವಂತಾಗಬೇಕಿದೆ. ನಂತರದ ದಿವಸಗಳಲ್ಲಿ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಚಿಂತಿಸಬಹುದಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಕುಡಿಯುವ ನೀರಿನ ಸಂಪರ್ಕವನ್ನು ಪ್ರತಿ ಗ್ರಾಮಗಳಿಗೆ ಕಲ್ಪಿಸುವುದರಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇಷ್ಟೆ ಅಲ್ಲದೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅಲ್ಲದೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲವಾಗುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಒಟ್ಟಾರೆ ಪ್ರದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.

ಜೋಯಿಡಾ ತಾಲ್ಲೂಕ ಅಭಿವೃದ್ದಿ ಪಥದಲ್ಲಿ ಹಿಂದುಳಿದಿದ್ದರೂ ಬಹಳಷ್ಟು ’ಇಲ್ಲ’ಗಳ ಮಧ್ಯೆಯೂ ’ಏನಿದೆ’ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸಬೇಕಾಗಿದೆ. ಅತ್ಯಂತ ಅಪರೂಪದ ಅತೀ ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿರುವ ಜೋಯಿಡಾ ತಾಲ್ಲೂಕಿನಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಅರಣ್ಯವೇ ತೊಡಕು ಎನ್ನುವ ಮಾತು ಕೇಳಿ ಬಂದರೂ, ಇಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಆರ್ಥಿಕ ಉನ್ನತಿಗೆ ಬಳಸಿ ಕೊಂಡಾಗ   ವರವಾಗಿ ಪರಿಣಮಿಸುವುದರಲ್ಲಿ ಯಾವುದೇ  ಸಂಶಯವಿಲ್ಲ. ಇಂತಹ ಅದ್ಭುತವಾದ ಅರಣ್ಯ ಸಂಪತ್ತನ್ನು ಉಳಿಸಲು ಇಲ್ಲಿಯ ಜನರೇ ಕಾರಣರಾಗಿದ್ದಾರೆ. ಆದ್ದರಿಂದ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ, ಸರ್ಕಾರದ ಹಾಗೂ ಸಮಸ್ತ ಜನರ ಜವಾಬ್ದಾರಿಯಾಗಬೇಕಿದೆ. ಇಲ್ಲಿಯ ಜನರು ಪರಿಸರ ಪ್ರೇಮಿಗಳಾಗಿದ್ದು ನಿಜವಾದ ಪರಿಸರಾಸಕ್ತರಾಗಿರುತ್ತಾರೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು  ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣವಾಗಿದೆ. ಕರ್ನಾಟಕದ  ಕಾಶ್ಮೀರವೆಂದು ಪ್ರಖ್ಯಾತಿ ಹೊಂದಿರುವ ಈ ಸ್ಥಳದಲ್ಲಿ ಸುಂದರ ಕಾನನಗಳು ಮೈತುಂಬಿ ಹರಿಯುವ ಜಲಪಾತಗಳು, ಮೈನವಿರೇಳಿಸುವ ಅಣಸಿ ರಾಷ್ಟ್ರೀಯ ಉದ್ಯಾನ ಹಾಗೂ ದಾಂಡೇಲಿ ವನ್ಯಜೀವಿ ಪಾರ್ಕ್‌ಗಳು, ಭಕ್ತಿ ಭಾವವನ್ನು ಬೀರುವ ಪವಿತ್ರ ಯಾತ್ರಾ ಸ್ಥಳ ಉಳವಿಯ ಶ್ರೀ ಚನ್ನಬಸವೇಶ್ವರ ಕ್ಷೇತ್ರ ಸುತ್ತಲಿನ ಆಕಳ ಗವಿ ಅರಳಯ್ಯನ ಚಿಲುಮೆ, ವಿಭೂತಿ ಖಣಜ, ಸಿಂಧೇರಿ ರಾಕ್ಸ್, ಕಾಳೀ ನದಿ, ಡಿಗ್ಗಿಯ ಹುಲ್ಲುಗಾವಲು ಪ್ರದೇಶಗಳು ಉಲ್ಲೇಖನೀಯವಾಗಿವೆ. ಇಲ್ಲಿಯ ಭತ್ತದ ಗದ್ದೆಗಳು, ಅಡಕೆ ತೋಟಗಳು, ಅರಣ್ಯದ ಮಧ್ಯದಲ್ಲಿದ್ದು ಮಳೆಗಾಲದಲ್ಲಿ ಅತೀ ಮನಮೋಹಕವಾಗಿ ಕಾಣುತ್ತವೆ. ಇದಕ್ಕೆ ಅನುಗುಣವಾಗಿ ಗ್ರಾಮಗಳು ಹಾಗೂ ಮಜರೆಗಳು ಅರಣ್ಯದ ಮಧ್ಯದಲ್ಲಿ ಚದುರಿಕೊಂಡಿರುವುದರಿಂದ ಪ್ರವಾಸಿಗರ ಮನಸ್ಸನ್ನು ಮನಸೂರೆಗೊಳ್ಳಲಿವೆ. ಇಲ್ಲಿಯ ಕೆಲವು ಒಳಭಾಗದ ಗ್ರಾಮಗಳಿಗೆ ಭೇಟಿ ನೀಡುವುದೇ  ಒಂದು ವಿಶಿಷ್ಟ ಅನುಭವ, ಅಲ್ಲಿ ತಂಗಿದರಂತೂ ಬಣ್ಣಿಸಲಾಗದ ಅನುಭವವನ್ನು ಪಡೆಯುವರು. ಒಂದೊಂದು ಮಜರೆಯು ಪ್ರವಾಸಿಗರಿಗೆ ವಿನೂತನವಾದ ರೆಸಾರ್ಟ್‌ನಲ್ಲಿರುವಂತೆ ತೋರಬಹುದು. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರವಾಸೋದ್ಯಮವನ್ನು ಬೆಳೆಸಬೇಕಿದೆ.

ಪಶ್ಚಿಮಘಟ್ಟಗಳಲ್ಲಿ ಸುರಿಯುವ ಮಳೆಯನ್ನು ವೀಕ್ಷಿಸುವ ಭಾಗ್ಯ ಅದೆಷ್ಟು ಜನರಿಗಿದೆ. ಸಮುದ್ರದ ದಡದಲ್ಲೊ ಬೆಟ್ಟದ ಮೇಲಿನ ಮನೆಯಲ್ಲೋ  ಕುಳಿತು ಮಳೆಗಾಲದಲ್ಲಿ ಮಳೆ ಬರುವ ದೃಶ್ಯವನ್ನು ವೀಕ್ಷಿಸುವದೊಂದು ಅಪೂರ್ವವಾದ ಅನುಭವ, ಮೋಡಗಳು ಆಕಾಶದಲ್ಲಿ ತೇಲಿ ಬರುವ ದೃಶ್ಯ ನೋಡು ನೋಡುತ್ತಿದ್ದಂತೆ ಸುರಿಯುವ ಮಳೆಯ ಸೊಬಗನ್ನು ನೋಡಿ ಆನಂದಿಸಿದವರನ್ನೇ ಕೇಳಬೇಕು. ಅರಣ್ಯಗಳ ಮಧ್ಯದಲ್ಲಿರುವ ಅಡಕೆ ತೋಟಗಳು, ಭತ್ತದ ಗದ್ದೆಗಳು ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರಾಗಿದ್ದು ಮಂಜು ಮುಸುಗಿದ ವಾತಾವರಣ ನೋಡುಗನಿಗೆ ’ಇಂದ್ರಲೋಕವೇ ಧರೆಗೆ ಇಳಿದು ಬಂದಂತ ದೃಶ್ಯ’ ಮನಮೋಹಕವಾಗಿರುತ್ತದೆ. ಇಂತಹ ಒಂದು ಅಪೂರ್ವವಾದ ಸೊಬಗನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸವಾದಲ್ಲಿ ನಿಜವಾಗಲೂ ಇಲ್ಲಿರುವ ಪ್ರವಾಸೋದ್ಯಮದ ಅವಕಾಶಗಳನ್ನು ತೆರೆದಿಟ್ಟಂತಾಗಬಹುದು.

ತಾಲ್ಲೂಕಿನಾದ್ಯಂತ ಹರಡಿಕೊಂಡಿರುವ ಮಜರೆಗಳು ಸೂಪಾ ಅಣೆಕಟ್ಟೆಯ ಹಿನ್ನೀರು, ಕಾಳಿ ಕಾನೇರಿ ನದಿಗಳು ಮತ್ತು ಇತರೆ ಸಣ್ಣ ಸಣ್ಣ ಝರಿಗಳು ಇವುಗಳ ಜೊತೆಗಿರುವ ಅಪರೂಪದ ಸಸ್ಯರಾಶಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ತಾಣಗಳಂತಿವೆ. ಗ್ರಾಮಾಂತರ ಪ್ರದೇಶದ ಜನರು ತಾವಿರುವಲ್ಲಿಯೇ ಪ್ರವಾಸಿಗರು ತಂಗಲು ಸರಳ, ಸ್ವಚ್ಚ, ಮನೆ, ಶೌಚಾಲಯದ ವ್ಯವಸ್ಥೆ ಸ್ಥಳೀಯ ಆಹಾರದ ಪೂರೈಕೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಜಾಲವನ್ನು ಅಭಿವೃದ್ದಿಪಡಿಸುವ ಅವಶ್ಯಕತೆಯಿದೆ. ಈ ರೀತಿಯ ’ಹೊಮ್ ಸ್ಟೇ’ ಪದ್ದತಿಯನ್ನು ಜಾರಿಯಲ್ಲಿ ತಂದು ಅವುಗಳನ್ನು ಅಭಿವೃದ್ದಿಪಡಿಸಲು ಸ್ಥಳೀಯ ಜನರು ಹಾಗು ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಸಾಧ್ಯವಾಗಬಹುದು. ಸರ್ಕಾರದ ವತಿಯಿಂದ ಒಳ್ಳೆಯ ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ, ಪ್ರವಾಸೋದ್ಯಮ, ಅರಣ್ಯ ಇಲಾಖೆಯವರ ಸಹಾಯ, ಸಹಕಾರ ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಹೋಮ್ ಸ್ಟೇ, ಸ್ಥಳಗಳ ಮಾಹಿತಿ ಅಲ್ಲಿರುವ ವ್ಯವಸ್ಥೆ ತಲುಪಲು ಇರುವ ಮಾರ್ಗ ಮತ್ತು ಎಲ್ಲಾ ರೀತಿಯ ಮಾಹಿತಿ ಜಾಲವನ್ನು ಸ್ಥಾಪಿಸಿ ನೂತನ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸುವ ಅವಶ್ಯಕತೆ ಬಹಳವಾಗಿದೆ. ಸಾಮಾನ್ಯವಾಗಿ ಇಲ್ಲಿರುವ ಗ್ರಾಮಗಳು ಮತ್ತು ಮಜರೆಗಳು ಸ್ವಚ್ಚತೆಯಿಂದಿವೆ. ಸ್ಥಳೀಯ ಗ್ರಾಮ ಪಂಚಾಯತಿಗಳು ಸ್ವಲ್ಪ ಮನಸ್ಸು ಮಾಡಿ ಗ್ರಾಮದಲ್ಲಿರುವ ಎಲ್ಲಾ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿ ಗ್ರಾಮಗಳ ಕಸ ವಿಲೇವಾರಿಯನ್ನು ಸುಗಮಗೊಳಿಸಿ ನಿರ್ಮಲ ಗ್ರಾಮಗಳನ್ನಾಗಿ ಮಾಡಲು ಸಾಧ್ಯವಿದೆ. ಇದು ಪ್ರವಾಸಿಗರನ್ನು ಆಕರ್ಶಿಸಲು ಬಹಳ ಸಹಕಾರಿಯಾಗಬಲ್ಲದು. ಈಗಾಗಲೇ ಅನೇಕ ಗ್ರಾಮ ಪಂಚಾಯತಿಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವುದು ಪ್ರಶಂಸಾರ್ಹವಾಗಿದೆ. ಇದೇ ಮಾದರಿಯಲ್ಲಿ ’ನಿರ್ಮಲ ತಾಲ್ಲೂಕು’ ಪುರಸ್ಕಾರ ಪಡೆಯುವುದು ಪ್ರವಾಸೋದ್ಯಮದ ಬೆಳವಣಿಗೆಗೆ ನಾಂದಿಯಾಗಲಿದೆ. ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ದಿ ಒಂದಕ್ಕೊಂದು ಪೂರಕವಾಗಿದ್ದು ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಉನ್ನತೀಕರಿಸುವಲ್ಲಿ ಹಾಗೂ ಆಯಾ ಪ್ರದೇಶದ ಅಭಿವೃದ್ದಿಗೆ ಪ್ರವಾಸೋದ್ಯಮ ಕಾಣಿಕೆಯಾಗಲಿದೆ. ತನ್ಮೂಲಕ ಸ್ಥಳೀಯ ಜನರ ಅಂದರೆ ಕುಣಬಿ, ಸಿದ್ದಿ, ಗೌಳಿ ಸಂಸ್ಕೃತಿಯ ರಕ್ಷಣೆ ಹಾಗೂ ಇದನ್ನು ಹೊರಗಿನವರಿಗೆ ಪರಿಚಯುಸುವ ಅವಶ್ಯಕತೆ ಸಹ ಬಹಳವಾಗಿದೆ.

ಇಲ್ಲಿಯ ಗ್ರಾಮಗಳಲ್ಲಿ ತಂಗಿ, ಅದರ ಸುತ್ತಲಿನ ಅರಣ್ಯದ ವೀಕ್ಷಣೆಯು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಂತಹ ಸುಂದರವಾದ ಅರಣ್ಯ ಪ್ರದೇಶ ಬೇರೆಲ್ಲಿಯೂ ಸಿಗಲಾರದು. ಅಣಸಿ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶ ಬೇಸಿಗೆಯಲ್ಲೂ ಸಹ ತಂಪಾದ ವಾತಾವರಣ ಹೊಂದಿರುವುದು ವಿಶೇಷತೆ. ಪ್ರಾಕೃತಿಕವಾಗಿ ಹವಾ ನಿಯಂತ್ರಿತ ಅರಣ್ಯ ಪ್ರದೇಶದಲ್ಲಿ ಕಾಲ್ನಡಗೆಯಿಂದ ಓಡಾಡುವುದು, ಅಲ್ಲಿರುವ ಮರಗಳನ್ನು ಪರಿಚಯಿಸಿಕೊಳ್ಳುವುದು, ವಿವಿಧ ಪಕ್ಷಿಗಳ, ಕೀಟಗಳ, ಸರಿಸೃಪಗಳ, ಕಪ್ಪೆಗಳ ವೀಕ್ಷಣೆ ಜೊತೆಗೆ ಕಾಡಿನಲ್ಲಿ ಕಂಡುಬರುವ ಅಪರೂಪದ ವನ್ಯಪ್ರಾಣಿಗಳಾದ ಹುಲಿ, ಕಪ್ಪು ಚಿರತೆ, ಕಾಳಿಂಗ ಸರ್ಪ, ಕಾಡೆಮ್ಮೆ, ಜಿಂಕೆ, ಕಡವೆ, ಮುಂತಾದ ವನ್ಯಜೀವಿಗಳ ಸಂದರ್ಶನ ಜೀವನದಲ್ಲಿ ಮರೆಯಲಾರದ ಅನುಭವವನ್ನು ನೀಡುತ್ತದೆ. ಒಮ್ಮೆ ಇವುಗಳನ್ನು ನೋಡಿದಲ್ಲಿ ಯಾರೂ ಸಹ ಅವರ ಜೀವನದಲ್ಲಿ ಮರೆಯದೆ ಮೆಲಕು ಹಾಕುವುದು ಹಾಗೂ ಇತರರೊಂದಿಗೆ ಹಂಚಿಕೊಳ್ಳುವುದೇ ಒಂದು ವಿಶಿಷ್ಟವಾದ ಅನುಭವವಾಗುತ್ತದೆ. ಬಹಳಷ್ಟು ಪ್ರವಾಸಿಗರು ಇಷ್ಟೆಲ್ಲಾ ಅಧ್ಬುತವಾದ ಕಾಡಿನಲ್ಲಿ ಸಂಚರಿಸಿದರೂ ಸಹ ವನ್ಯ ಪ್ರಾಣಿಗಳು ನೋಡಲು ಸಿಗಲಿಲ್ಲವೆಂಬ ಕೊರಗಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಸ್ಥಳೀಯ ಜನರೇ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ(ಗೈಡ್) ಅರಣ್ಯದ ಹಾಗೂ ಸ್ಥಳೀಯ ವೈವಿಧ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿ ಇಂತಹ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಬಹುದು. ಅರಣ್ಯವೆಂದರೆ ಕೇವಲ ದೊಡ್ಡ ದೊಡ್ಡ ಮರಗಳು ಪ್ರಾಣಿಗಳಷ್ಟೇ ಅಲ್ಲ ಅಲ್ಲಿರುವ ಪ್ರತಿಯೊಂದು ಗಿಡ, ಬಳ್ಳಿ, ಪೊದೆ, ಸಣ್ಣ ಸಣ್ಣ ಕ್ರಿಮಿ, ಕೀಟಗಳು ಅಪರೂಪದ ಸಸ್ಯಗಳು, ಜೇನು, ಕೀಟದ ಗೂಡುಗಳು, ಪಕ್ಷಿಗಳ ವಾಸಸ್ಥಳಗಳು, ನೀರಿನ ಝರಿ (ಜಲಪಾತಗಳು), ಬೆತ್ತ, ಬಿದಿರು, ರೀಡ್ಸ್, ಹುತ್ತ ಹೀಗೆ ಹತ್ತು ಹಲವು ಜೀವ ವೈವಿಧ್ಯತೆಯನ್ನು ಸಾರಿ ಹೇಳುವ ಗೈಡ್‍ಗಳ ಅವಶ್ಯಕತೆಯಿದೆ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರು ಉದ್ಯೋಗವನ್ನು ಪಡೆಯಲು ಸಹಕಾರಿಯಾಗುವುದೊರೊಂದಿಗೆ ಪ್ರವಾಸಿಗರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಿಗಳಿಸಿದಂತಾಗುವುದು. ಇದರಿಂದ ವಿಶ್ವದಲ್ಲಿ ಏರುತ್ತಿರುವ ವಾತಾವರಣದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಪರಿಸರ ಪ್ರವಾಸಿಗರ ಪಡೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗುವರು.

ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಇಲ್ಲಿರುವ ಗ್ರಾಮದ ಮಜರೆಗಳಲ್ಲಿ ಸರಳ, ಸುಂದರ ಸ್ವಚ್ಚ, ವಸತಿ ವ್ಯವಸ್ಥೆಯ ನಿರ್ಮಾಣ ಸ್ಥಳೀಯ ಆಹಾರವನ್ನು ನೀಡುವ ಪದ್ದತಿಯಾದಲ್ಲಿ ದೇಶ ವಿದೇಶದ ಪ್ರವಾಸಿಗರು ತಂಡೋಪತಂಡವಾಗಿ ಭೇಟಿ ನೀಡುವರು . ಇಂತಹ ಪ್ರವಾಸಿಗರಿಗೆ ಸುತ್ತಲಿನ ಅರಣ್ಯ ಪ್ರದೇಶ ಮತ್ತು ಜಲಪಾತಗಳ ಪರಿಚಯಿಸುವುದರಿಂದ ಮನಸ್ಸಿಗೆ ಉಲ್ಲಾಸದ ಜೊತೆಗೆ ಅರಣ್ಯ ಮತ್ತು ಪರಿಸರದ ಮಾಹಿತಿ, ಜೀವ ವೈವಿಧ್ಯತೆಯ ಪರಿಚಯ, ಜಲಾನಯನ ಪ್ರದೇಶದ ರಕ್ಷಣೆ ಬಗ್ಗೆ ತಿಳುವಳಿಕೆ ಪ್ರವಾಸಿಗರನ್ನು ಅಧ್ಯಯನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ "ಪ್ರಕೃತಿಯು ತೆರೆದ ಪುಸ್ತಕ" ಎನ್ನುವ ಮಾತನ್ನು ಸಾಕಾರಗೊಳಿಸಬಹುದಾಗಿದೆ.

ಯಾವ ಉದ್ಯಮಕ್ಕೂ ಕಡಿಮೆಯೆನಿಸದ ಪ್ರವಾಸೋದ್ಯಮ ಗಡಿಭಾಗದ ಅಭಿವೃದ್ದಿ ದೃಷ್ಠಿಯಿಂದ ಅರಣ್ಯ ಮತ್ತು ಪರಿಸರ ರಕ್ಷಣೆಯೊಂದಿಗೆ ಹೆಚ್ಚಿನ ಒತ್ತನ್ನು ನೀಡುವುದು ಜನತೆಯ ಕರ್ತವ್ಯಗಳಲ್ಲಿ ಒಂದಾಗಬೇಕಿದೆ. ಹಸಿರಿನ ಮಧ್ಯದಲ್ಲಿ ನಡೆಸಬಹುದಾದ ಬೃಹತ್ ಉದ್ಯಮದ ಬೆಳವಣಿಗೆ, ಅಭಿವೃದ್ದಿಗೆ ಮಹತ್ವದ ಕಾಣಿಕೆಯಾಗಲಿದೆ. ಪ್ರವಾಸೋದ್ಯಮದಿಂದ ಆದಾಯ ಹೆಚ್ಚಿದಂತೆ ಆಯಾ ಭಾಗದ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯು ಹೆಚ್ಚುವುದರೊಂದಿಗೆ ಅಭಿವೃದ್ದಿಯ ಗತಿಯನ್ನು ಹೆಚ್ಚಿಸಲು ಸಾಧ್ಯವಾಗುವುದು.

ಪ್ರವಾಸಿಗರನ್ನು ಆಕರ್ಶಿಸಲು ಸ್ಥಳೀಯ ವಿಶೇಷತೆಯ ಬಗ್ಗೆ ಪ್ರಚಾರ ನೀಡುವ ಕೆಲಸವಾಗಬೇಕಿದೆ. ಪ್ರವಾಸೋದ್ಯಮಕ್ಕೆ ಬೇಕಾದ ಪೂರಕ ವಾತಾವರಣ, ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಜನರ ಮನೋಭಾವದಲ್ಲಿ ಪ್ರವಾಸಿಗರನ್ನು ಆದರಾತಿಥ್ಯದೊಂದಿಗೆ ನಡೆಸಿಕೊಳ್ಳುವ ಭಾವನೆಯೊಂದಿಗಿನ ಸಹಭಾಗಿತ್ವ ಗಡಿಭಾಗದ ಆರ್ಥಿಕ ಉನ್ನತಿಗೆ ಮಹತ್ವದ ಹೆಜ್ಜೆಯಾಗಲಿದೆ.

No comments:

Post a Comment