Pages

Tuesday, December 7, 2010

ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ

Kali River Valley in U.K.
ಅರಣ್ಯದ ಜಿಲ್ಲೆ ಎಂದೇ ಪ್ರಖ್ಯಾತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರವಾದಿಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವರೆನ್ನುವ ಪ್ರತೀತಿ ಇದೆ. ರಾಜ್ಯದ ಅತಿ ವಿಸ್ತಾರವಾದ, ಗುಡ್ಡಗಾಡಿನಿಂದ ಕೂಡಿರುವ ಈ ಜಿಲ್ಲೆಯಲ್ಲಿ ಅರಣ್ಯ ರಕ್ಷಣೆ ಸಹ ಅಭಿವೃದ್ಧಿಯಷ್ಟೇ ಮಹತ್ವವನ್ನು ಪಡೆದಿದೆ. ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳವು ವಿಶ್ವದ ೧೮ ಜೀವ  ವೈವಿಧ್ಯತಾ ತಾಣಗಳಲ್ಲಿ ಒಂದಾಗಿದ್ದು ಅತೀ ಮನಮೋಹಕ ಜಲಧಾರೆ (ವಾಟರ್ ಫಾಲ್ಸ್) ಗಳನ್ನೂ ಹೊಂದಿದ್ದು, ಸುಂದರವಾದ ಮನಮೋಹಕ ಪ್ರಾಕೃತಿಕ ಸೊಬಗನ್ನು ಹಾಗು ಅನೇಕ ಅತೀ ಮಹತ್ವದ ವನ್ಯಪ್ರಾಣಿ ಗಳಿಂದಲೂ ಮತ್ತು ಸಸ್ಯರಾಶಿಗಳಿಂದಲೂ ಕೂಡಿರುವ ಪ್ರಾಕೃತಿಕ ಖಣಜವೆನಿಸಿದೆ. ಇಲ್ಲಿ ಉಗಮವಾಗುವ ನದಿಗಳಿಂದ ರಾಜ್ಯಕ್ಕೆ ಬೇಕಾಗಿರುವ ವಿದ್ಯುತ್ತನ್ನು ಉತ್ಪತ್ತಿ ಮಾಡಲಾಗುತ್ತದೆ ಹಾಗು ಅನೇಕ ನದಿಗಳು ಪುರ್ವಾಭಿಮುಖವಾಗಿ ಹರಿದು ನೀರಾವರಿಗೆ ಅನುಕೂಲವಾಗಿವೆ. ಇಂಥಹ ಪ್ರದೇಶದಲ್ಲಿ ಅಭಿವೃದ್ಧಿ ಹಾಗು ಪರಿಸರ ಸಂರಕ್ಷಣೆ (ಅರಣ್ಯ ಸಂರಕ್ಷಣೆ) ಜೊತೆಗೂಡಿ ಸಾಗಬೇಕಿದೆ. ಒಂದು ಇನ್ನೊಂದನ್ನು ಕಡಿಮೆ ಗೊಳಿಸುವ ಪ್ರವೃತ್ತಿಯನ್ನು ಬಿಟ್ಟು, ಅಭಿವೃದ್ಧಿ ಹಸಿರಿನ ಮಧ್ಯೆ ಅಭಿವೃದ್ಧಿ ಹೊಂದಿದಾಗ ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಬಹುದು. "ಹಸಿರಿನ ನಾಶ ಮಾನವನ ವಿನಾಶ" ಎನ್ನುವ ಉಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಾಗ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಬಹುದು ಎನ್ನುವುದನ್ನು ನಮ್ಮ ಚರಿತ್ರೆಯಿಂದ ತಿಳಿದುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಈಗಾಗಲೇ ಮಣ್ಣಿನಡಿ ಮುಚ್ಚಿಹೋಗಿರುವ ಹೆಸರಾಂತ ನಾಗರಿಕತೆಗಳ ಸಾಲಿನಲ್ಲಿ ಒಂದಾಗುವುದನ್ನು  ತಪ್ಪಿಸುವ ಪ್ರಯತ್ನ ನಮ್ಮದಾಗಬೇಕಿದೆ.

ಸಮುದಾಯ ಸಹಭಾಗಿತ್ವದ ಅಗತ್ಯ 
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ "ಗ್ರಾಮ ಸ್ವರಾಜ್ಯ-ರಾಮ ರಾಜ್ಯ" ವಾಗ ಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಜನರ ಸಹಭಾಗಿತ್ವ  ಹಾಗು ಸಹಕಾರ ಅಗತ್ಯವಾಗಿದೆ. ಸರ್ಕಾರದ ಅನೇಕ ಯೋಜನೆಗಳ ಫಲವಾಗಿ ಇಂದು ಗ್ರಾಮಗಳಲ್ಲಿ ರಸ್ತೆ, ಅರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಇಲ್ಲಿ ಸಮುದಾಯದ ಆಸ್ತಿ ಹಾಗು ವೈಯಕ್ತಿಕ ಅಭಿವೃದ್ಧಿಗೆ ಒತ್ತನ್ನು ನೀಡುವುದು ವೇದ್ಯವಾಗುತ್ತದೆ. ಸಾರ್ವಜನಿಕ ವ್ಯವಸ್ಥೆ ಆಗಿರುವ ನೀರಿನ ಪೂರೈಕೆ, ರಸ್ತೆ, ಸಂಚಾರ, ಅರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬೇಕಾದರೆ ಗ್ರಾಮೀಣ ಭಾಗದ ಜನರ ಸಹಭಾಗಿತ್ವದಿಂದ ಸಾಧ್ಯವಾಗುವುದು. ಈ ಸಾರ್ವಜನಿಕ ವ್ಯವೆಸ್ಥೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾದಲ್ಲಿ ಸಮುದಾಯದ ಆಸ್ತಿ,  ಸಾರ್ವಜನಿಕ ವ್ಯವಸ್ಥೆ ನಮ್ಮದು-ನಮಗಾಗಿ ಎನ್ನುವ ಮನೋಭಾವನೆ ಸಾರ್ವಜನಿಕರಲ್ಲಿ ಇರಬೇಕಾದದ್ದು ಮಹತ್ವದ ಅಂಶ. ಈ ಅಂಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಜನ ಪ್ರತಿನಿಧಿಗಳಿಂದ, ಧಾರ್ಮಿಕ ಮುಖಂಡರಿಂದ ಹಾಗು ಸರ್ಕಾರದ ಅಧಿಕಾರಿಗಳಿಂದ ಆಗ ಬೇಕಾಗಿದೆ. ಜನರಲ್ಲಿ ಈ ಭಾವನೆ ಬಂದಿದ್ದೆ ಆದಲ್ಲಿ  ಅಭಿವೃದ್ಧಿಯ ಗತಿಯನ್ನು ಹೆಚ್ಚಿಸಲು ಸಾದ್ಯವಾಗುತ್ತದೆ. ಅಷ್ಟೇ ಅಲ್ಲದೆ ಸಮುದಾಯದ ಆಸ್ತಿ ನಿರ್ವಹಣೆ ಯಾವುದೇ ಸಮಸ್ಯೆ ಇಲ್ಲದೇ ನಿರಂತರತೆ ಕಾಯ್ದುಕೊಂಡು ಸುಸ್ಥಿರ ಅಭಿವೃದ್ಧಿಯನ್ನು  ಹೊಂದಲು ಸಾಧ್ಯವಾಗುತ್ತದೆ. ಒಂದು ಉದಾಹರಣೆ: ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿರುವ ಜಲ ನಿರ್ಮಲ ಯೋಜನೆ. ಇದೊಂದು ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುವ, ಗ್ರಾಮದ ಪರಿಸರ ನೈರ್ಮಲ್ಯವನ್ನು ಕಾಪಾಡುವ ಯೋಜನೆಯಾಗಿದೆ. ಈ ಯೋಜನೆ ಅಡಿ ಗ್ರಾಮೀಣ ಮಟ್ಟದಲ್ಲಿ "ಗ್ರಾಮ ನೀರು ಪೂರೈಕೆ ಹಾಗು ನೈರ್ಮಲ್ಯ ಸಮಿತಿಯನ್ನು" ರಚನೆ ಮಾಡಿ, ಜನರ ಅವಶ್ಯಕತೆಗೆ ತಕ್ಕಂತೆ ಯೋಜನೆಯನ್ನು ತಾಂತ್ರಿಕ ನೆರವಿನಿಂದ ಸಿದ್ಧಪಡಿಸಿ ಸಮಿತಿಯಿಂದಲೇ ಅನುಷ್ಠಾನ ಮಾಡಲಾಗುವುದು. ಅಲ್ಲಿ ಸಹಭಾಗಿತ್ವದೊಂದಿಗೆ ಶೇಖಡ ೧೦ ರ ಸಮುದಾಯದ ವಂತಿಗೆ ಯೊಂದಿಗೆ ಮತ್ತು ಗ್ರಾಮ ಪಂಚಾಯತ್ ನ ಶೇಕಡಾ ೫ ರ  ವಂತಿಗೆಯೊಂದಿಗೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಲವಾರು ಸಮಿತಿಗಳು ಸಕ್ರಿಯವಾಗಿ ಪಾಲ್ಗೊಂಡು ಗ್ರಾಮದ ಅವಶ್ಯಕತೆಗೆ ತಕ್ಕಂತೆ ಕುಡಿಯುವ ನೀರಿನ ಮತ್ತು  ನೈರ್ಮಲ್ಯ ಯೋಜನೆಯ ಅನುಷ್ಠಾನ ಗುಣಮಟ್ಟಕ್ಕೆ ಅನುಗುಣವಾಗಿ ಮತ್ತು ಪಾರದರ್ಶಕವಾಗಿ ಕಾರ್ಯಾನುಷ್ಠಾನ ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಯೋಜನೆಯ ನಿರ್ವಹಣೆಗೂ ಅಷ್ಟೇ ಒತ್ತನ್ನು ನೀಡಲಾಗಿದೆ. ಸಮಿತಿಗಳು ಸಕ್ರಿಯವಾಗಿ ನಿರ್ವಹಣೆಯನ್ನು ನಿರ್ವಹಿಸಿದಲ್ಲಿ ಯಾವುದೆ ಸಮಸ್ಯೆ ಇಲ್ಲದೆ ನೀರು ಪೂರೈಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ . ಯಾವುದೇ ಯೋಜನೆ ಕೇವಲ ಅನುಷ್ಠಾನವಾದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ.  ಅನುಷ್ಠಾನ ಒಂದು ಅಂಶವಾದರೆ, ಅದರ ನಿರ್ವಹಣೆ ಅಷ್ಟೇ ಮಹತ್ವದ ಮತ್ತೊಂದು ಅಂಶವೆನ್ನುವುದನ್ನು ಮರೆಯಲಾಗದು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಯೋಜನೆಗಳ ಯಶಸ್ವಿ ಅನುಷ್ಠಾನ
ಜಿಲ್ಲೆಯಲ್ಲಿ ಅನುಷ್ಟಾನವಾಗುತ್ತಿರುವ  "ಸರ್ವ  ಶಿಕ್ಷ ಅಭಿಯಾನ ", "ಸಂಪೂರ್ಣ ಸ್ವಚ್ಛತಾ ಆಂದೋಲನಾ", ಸಾಕ್ಷರತಾ ಆಂದೋಲನಗಳಲ್ಲಿಯೂ ಹೆಚ್ಚಿನ ಒತ್ತನ್ನು ಸಹಭಾಗಿತ್ವಕ್ಕೆ ನೀಡಲಾಗಿದೆ. ಇವೆಲ್ಲವೂ ಸಾರ್ವಜನಿಕ ವ್ಯವಸ್ಥೆಯಾಗಿದ್ದರೂ ಸಹಾ ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಸರ್ವ ಶಿಕ್ಷಾ ಅಭಿಯಾನದಲ್ಲಿ ಶಾಲೆಗಳ ಅಭಿವೃದ್ಧಿಯೊಂದಿಗೆ ಶಿಕ್ಷಣದ ಗುಣಮಟ್ಟಕ್ಕೆ ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯಬಾರದೆನ್ನುವ ಅಂಶಗಳಿಗೆ ಮಹತ್ವವನ್ನು ನೀಡಲಾಗಿದೆ. ಅದೇ ರೀತಿ ಸಾಕ್ಷರತಾ ಅಂದೋಲನದಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಾರ್ಯಕ್ಕೆ ಸಂಪೂರ್ಣ ಸ್ವಚ್ಛತಾ ಅಂದೋಲನದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ, ಗ್ರಾಮಗಳ ಸ್ವಚ್ಛ ಪರಿಸರಕ್ಕೆ ಆಧ್ಯತೆಯನ್ನು ನೀಡಲಾಗಿದೆ. ಇಂತಹಾ ವೈಯಕ್ತಿಕ ಲಾಭವಿರುವ ಯೋಜನೆಗಳಲ್ಲಿ ಜನರ ಸಹಭಾಗಿತ್ವದೊಂದಿಗೆ ಮಾತ್ರ ಯಶಸ್ಸನ್ನು ಕಾಣಬಹುದು. ಇದರಿಂದ ೨೦೦೭ ನೇ ಸಾಲಿನಲ್ಲಿ ಜಿಲ್ಲೆಯ ೧೧ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯದಿಂದ ನೀಡುವ "ನಿರ್ಮಲ ಗ್ರಾಮ" ಪುರಸ್ಕಾರವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇದೇ ರೀತಿಯ ಜಿಲ್ಲೆಯ ಜನರ ಸಹಕಾರದಿಂದ ಮುಂಬರುವ ವರ್ಷಗಳಲ್ಲಿ "ನಿರ್ಮಲ ತಾಲೂಕ್" ಹಾಗೂ "ನಿರ್ಮಲ ಜಿಲ್ಲಾ" ಪುರಸ್ಕಾರಕ್ಕೆ ಸಜ್ಜುಗೊಳಿಸುವುದು ಸರ್ವರ ಆಶಯವಾಗಬೇಕಿದೆ. ಇಂತಹಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮನೋಭಾವನೆಯನ್ನು ಜನರಲ್ಲಿ ಮೂಡಿಸುವ ಕೆಲಸಕ್ಕೆ ಸರ್ವರೂ ಪ್ರಯತ್ನಶೀಲರಾಗಬೇಕಾದದ್ದು ಇಂದಿನ ಅವಶ್ಯಕತೆಗಳಲ್ಲೊಂದಾಗಬೇಕಿದೆ.

ಗ್ರಾಮ ಪಂಚಾಯತ್ ಗಳ ಸಬಲೀಕರಣ
ಗ್ರಾಮೀಣಾಭಿವೃದ್ಧಿಗಾಗಿ ವಿಕೆಂದ್ರೀಕೃತ ವ್ಯವಸ್ಥೆ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳ ಜನಪ್ರತಿನಿಧಿಗಳೊಂದಿಗೆ ಸಂವಿಧಾನಾತ್ಮಕವಾಗಿ ರಚಿಸಲ್ಪಟ್ಟಿವೆ. ಈ ಮೂರು ತೆರನಾದ ಹಂತದಲ್ಲಿ ನಿರ್ವಹಿಸಬೇಕಾದ ಕೆಲವು ಕಾರ್ಯಗಳನ್ನು ಚಟುವಟಿಕೆ ನಕ್ಷೆಯಂತೆ, ಸಹಕಾರ ಮನೋಭಾವನೆಯಿಂದ ಸಂಯೋಜಿತ ರೀತಿಯಲ್ಲಿ ಅನುಷ್ಠಾನವಾಗಬೇಕಿದೆ, ಹಾಗೂ ಕ್ರಿಯಾ ಯೋಜನೆ ತಯಾರಿಯನ್ನು ಅವಶ್ಯಕತೆಗನುಗುಣವಾಗಿ ತಯಾರಿಸಿ ಅನುಷ್ಠಾನಗೊಳಿಸುವ ಕೆಲಸವಾಗಬೇಕಿದೆ. 
ವಿಕೆಂದ್ರೀಕೃತ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಜನರ ಆಶೋತ್ತರಗಳಿಗೆ ಅನುಗುಣವಾಗಿ ಒದಗಿಸುವ ಮಹತ್ವದ ಜವಾಬ್ದಾರಿ ಗ್ರಾಮ ಪಂಚಾಯತದ್ದಾಗಿರುತ್ತದೆ. ಈ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಹಣದ ಅವಶ್ಯಕತೆ ಬಹಳವಾಗಿದೆ. ಸರ್ಕಾರದಿಂದ ಬರುವ ಅನುದಾನದ ಜೊತೆಗೆ ಜನರ ಸಹಭಾಗಿತ್ವದಿಂದ ಬಂಡವಾಳ ಕ್ರೋಡೀಕರಿಸುವ ಕೆಲಸವಾಗಬೇಕಿದೆ. ಸರ್ಕಾರವನ್ನು ಬಿಟ್ಟರೆ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ತೆರಿಗೆಯನ್ನು ವಿಧಿಸುವ ಮತ್ತು ಅದರಿಂದ ಬಂದ ಆಧಾಯವನ್ನು ಅಭಿವೃದ್ಧಿಗಾಗಿ ವೆಚ್ಚ ಭರಿಸುವ ಅಧಿಕಾರವಿರುತ್ತದೆ. ಆದುದರಿಂದ ಜನಪ್ರತಿನಿಧಿಗಳು ಜನರ ಸಹಕಾರದೊಂದಿಗೆ ಆದಾಯವನ್ನು ಹೆಚ್ಚಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಬೇಕಿದೆ. ಇದರಿಂದ ಗ್ರಾಮಗಳಲ್ಲಿ ಬೀದಿ ದೀಪದ ವೆಚ್ಚ, ಕುಡಿಯುವ ನೀರಿನ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳ ಸೃಷ್ಠಿ ಸಾಧ್ಯವಾಗುತ್ತದೆ. ಖರ್ಚು ಮತ್ತು ಆದಾಯವನ್ನು ಸರಿತೂಗಿಸುವ ಕೆಲಸ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗಬೇಕಾದದ್ದು ಪ್ರಮುಖ ಅಂಶವಾಗಿದೆ. ಇಂದು ಬಹಳಷ್ಟು ಗ್ರಾಮ ಪಂಚಾಯತಿಗಳು ತಮ್ಮ ಗ್ರಾಮದಲ್ಲಿಯ ಬೀದಿ ದೀಪಗಳ ಮತ್ತು ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ ಭರಿಸಲು ಸಹಾ ಹಣಕಾಸಿನ ಕೊರತೆಯನ್ನು ಎದುರಿಸುತ್ತಿವೆ. ಇಲ್ಲಿ ಜನ ಪ್ರತಿನಿಧಿಗಳು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರನ್ನು ಪಾಲುದಾರರನ್ನಾಗಿ ಮಾಡುವ ಮಹತ್ವದ ಅಂಶಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕಿದೆ. ಗ್ರಾಮ ಸಭೆಗಳು, ಸ್ಥಳೀಯ ವಿಧಾನ ಸಭೆಗಳಾಗಿ ಪರಿವರ್ತನೆಯಾಗಬೇಕಿದೆ. ಗ್ರಾಮ ಸಭೆಗಳು ಪ್ರಜಾಪ್ರಭುತ್ವದ ತಳಹದಿಯಾಗಿದ್ದು, ಗ್ರಾಮದ ಎಲ್ಲಾ ಸ್ಥರದ, ವರ್ಗದ ಜನರು ತಪ್ಪದೆ ಭಾಗವಹಿಸುವ ಮತ್ತು ಅಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚೆಗೆ ಅವಕಾಶವನ್ನು ನೀಡಬೇಕಿದೆ. ಇದರಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಸ್ಥಳೀಯರ ಸಹಭಾಗಿತ್ವ ಮತ್ತು ಸಹಕಾರವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಗ್ರಾಮ ಸಭೆಗಳಲ್ಲಿ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡುವುದರಿಂದ ಯೋಜನೆಯ ಪಾಲುದಾರರನ್ನಾಗಿ ಮಾಡುವುದರ ಜೊತೆಗೆ ಯೋಜನೆಯನ್ನು ಫಲಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವೆನಿಸುತ್ತದೆ. ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮ ಸಭೆಗಳ ಪಾತ್ರ ದೊಡ್ದದೆನಿಸುತ್ತಿದೆ. ಇಂದು ಗ್ರಾಮ ಪಂಚಾಯತಿಗಳು ಸಮರ್ಥ ಸಿಬ್ಬಂದಿಯ ಕೊರತೆ ಹಾಗೂ ಬಂಡವಾಳ ಕ್ರೋಡೀಕರಣದ ಕೊರತೆಯಿಂದ ಬಳಲುತ್ತಿವೆ. ಇವುಗಳಿಂದ ಮುಕ್ತವಾಗಿಸಿ, ಗ್ರಾಮ ಪಂಚಾಯತಗಳ ಸಬಲೀಕರಣದೆಡೆಗೆ ಪ್ರಯತ್ನಿಸಬೇಕಿದೆ.

ಗ್ರಾಮ ಪಂಚಾಯ್ತಿಗಳು,ತಾಲ್ಲೂಕ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಪೂರಕವಾಗಿ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಬೇಕಿದೆ. ಇಲ್ಲಿ ಆರೋಗ್ಯ, ಶಿಕ್ಷಣ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನವಹಿಸಿ, ಸಾರ್ವಜನಿಕ ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟರ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿ ಕಾರ್ಯನಿರ್ವಹಿಸುವುದು ಅವಶ್ಯವೆನಿಸುತ್ತದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಸಂರಕ್ಷಣೆ
ಜಿಲ್ಲೆಯು ಶೇಕಡಾ ೮೦ ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಪರಿಸರಕ್ಕೆ ಪೂರಕವಾದ ಅಭಿವೃದ್ಧಿಯತ್ತ ಯೋಚಿಸಿದಾಗ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಜನರು ವಾಸಿಸುವ ಗ್ರಾಮಗಳಲ್ಲಿಯೇ "ಹೋಂ ಸ್ಟೇ" ಪದ್ಧತಿಯನ್ನು ರೂಡಿಯಲ್ಲಿ ತಂದು ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಬೇಕಾದ ಅನುಕೂಲಗಳನ್ನು ನೀಡಬೇಕಾಗಿದೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ "ಹೋಂ ಸ್ಟೇ"ಗೆ ಪೂರಕವಾದ್ದು, ಸ್ಥಳೀಯ ಜನರ ಆಸಕ್ತಿವಹಿಸಿ ಅವರು ವಾಸಿಸುವ ಮನೆಯಲ್ಲಿಯೇ ಒಂದು ಭಾಗವನ್ನು ಪ್ರವಾಸಿಗರಿಗೆ ಮೀಸಲಿಟ್ಟು  ಪ್ರವಾಸಿಗರ ಬೇಕೂ ಬೇಡಗಳಿಗೆ ಸ್ಪಂದಿಸಬೇಕಾಗಿದೆ. ಇಂತಹ "ಹೋಂ ಸ್ಟೇ"ಗಳು ಮಾಹಿತಿ ಜಾಲವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಇಲಾಖೆಗಳು ಸ್ಥಳೀಯ ಜನರೊಂದಿಗೆ ಕೈಜೋಡಿಸಬೇಕಿದೆ. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಹೆಚ್ಚಿ ಪರಿಸರ ಪ್ರವಾಸೋದ್ಯಮ ಗ್ರಾಮೀಣಾಭಿವೃದ್ಧಿಯ ಕೇಂದ್ರ ಬಿಂದುವಾಗಲಿದೆ.

ಜಿಲ್ಲೆಯಾದ್ಯಂತ ಹರಡಿಕೊಂಡಿರುವ ಮಜರೆಗಳು (೬೪೫೦) ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ತಾಣಗಳಂತೆ ಇವೆ. ಗ್ರಾಮಾಂತರ ಪ್ರದೇಶದ ಜನರು ತಾವಿರುವಲ್ಲಿಯೇ ಪ್ರವಾಸಿಗಳು ತಂಗಲು ಸರಳ, ಸ್ವಚ್ಛ ಮನೆ,  ಶೌಚಾಲಯದ ವ್ಯವಸ್ಥೆ, ಸ್ಥಳೀಯ ಆಹಾರದ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಜಾಲವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಈ ರೀತಿಯ "ಹೋಂ ಸ್ಟೇ" ಪದ್ಧತಿಯನ್ನು ಜಾರಿಯಲ್ಲಿ ತಂದು ಅವುಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಜನರು ಹಾಗೂ ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಸಾಧ್ಯವಾಗಬಹುದು. ಸರ್ಕಾರದ ವತಿಯಿಂದ ಒಳ್ಳೆಯ ರಸ್ತೆ-ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯವರ ಸಹಾಯ ಹಾಗೂ ಸಹಕಾರ, ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳು ಜಿಲ್ಲೆಯಲ್ಲಿರುವ "ಹೋಂ ಸ್ಟೇ" ಸ್ಥಳಗಳ ಮಾಹಿತಿ, ಅಲ್ಲಿರುವ ವ್ಯವಸ್ಥೆ, ತಲುಪಲು ಇರುವ ಮಾರ್ಗ ಮತ್ತು ಎಲ್ಲಾ ರೀತಿಯ ಮಾಹಿತಿ ಜಾಲವನ್ನು ಸ್ಥಾಪಿಸಿ, ಈಗಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿರುವ ಗ್ರಾಮಗಳು ಮತ್ತು ಮಜರೆಗಳು ಸ್ವಚ್ಛತೆಯಿಂದ ಕೂಡಿವೆ. ಸ್ಥಳೀಯ ಗ್ರಾಮ ಪಂಚಾಯತಿಗಳು ವೈಯಕ್ತಿಕ ಶೌಚಾಲಯದತ್ತ ಹೆಚ್ಚಿನ ಗಮನ ನೀಡಿ, ಊರಿನ ಕಸವಿಲೇವಾರಿಯನ್ನು ಸುಗಮಗೊಳಿಸಿದಲ್ಲಿ ನಿರ್ಮಲ ಗ್ರಾಮಗಳನ್ನಾಗಿ ಮಾಡಲು ಸಾಧ್ಯವಿದೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸಲು ಬಹಳ ಸಹಕಾರಿಯಾಗಬಲ್ಲದು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ೧೧ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರದಿಂದ ಕೊಡಲ್ಪಡುವ "ನಿರ್ಮಲ ಗ್ರಾಮ" ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಇದರ ಪರಿಣಾಮ ಅಕ್ಕಪಕ್ಕದ ಗ್ರಾಮಗಳಲ್ಲೂ ಪರಿಣಾಮ ಬೀರಲಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾಣಿಕೆಯಾಗಲಿದೆ. ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ಧಿ ಒಂದಕ್ಕೊಂದು ಪೂರಕವಾಗಿದ್ದು, ಗ್ರಾಮೀಣ ಭಾಗದ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಿಸುವಲ್ಲಿ ಹಾಗೂ ಆಯಾ ಪ್ರದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಕೊಡುಗೆಯಾಗಲಿದೆ. ತನ್ಮೂಲಕ ಸ್ಥಳೀಯ ಜನರ ಅಂದರೆ ಸಿದ್ಧಿ, ಗೌಳಿ, ಹಾಲಕ್ಕಿ, ಒಕ್ಕಲಿಗ ಹಾಗೂ ಗೊಂಡ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವ ಹಾಗೂ ರಕ್ಷಿಸುವ ಅವಶ್ಯಕತೆ ಸಹಾ ಇದೆ.
ಜಿಲ್ಲೆಯ ಗ್ರಾಮಗಳಲ್ಲಿ ತಂಗಿದಲ್ಲಿ ಅದರ ಸುತ್ತಲಿನ ಅರಣ್ಯದ ವೀಕ್ಷಣೆ ಯು ಪ್ರವಾಸಿಗರಿಗೆ ವಿಶಿಷ್ಟ ಅನುಭವ ವನ್ನು ನೀಡುತ್ತದೆ. ಇಂತಹ ಸುಂದರವಾದ ಅರಣ್ಯ ಪ್ರದೇಶ ಬೇರೆಲ್ಲಿಯೂ ಸಿಗಲಾರದು. ಅಣಶಿ ಗ್ರಾಮದ ಸುತ್ತಲಿನ ಅರಣ್ಯದಲ್ಲಿ  ಬೇಸಿಗೆಯಲ್ಲೂ ತುಂಬಾ ತಂಪಾದ ವಾತಾವರಣ ವನ್ನು ಹೊಂದಿರುವುದು ಜಿಲ್ಲೆಯ ವಿಶೇಷಗೊಳಲ್ಲಿ ಒಂದಾಗಿದೆ . ಪ್ರಾಕೃತಿಕವಾಗಿ ಹವಾನಿಯಂತ್ರಣದಂತಿರುವ ಅರಣ್ಯ ಪ್ರದೇಶದಲ್ಲಿ ಕಲ್ನಡಿಗೆಯಿಂದ ಓಡಾಡಬಹುದು, ಅಲ್ಲಿರುವ ಮರಗಳನ್ನು ಪರಿಚಿಸಿಕೊಳ್ಳುವುದು, ಮರಗಳ ಮೇಲಿನ ವಿವಿದ ಪಕ್ಷಿಗಳ ವೀಕ್ಷಣೆ, ಕೀಟಗಳು, ಸರಿಸೃಪಗಳು , ಕಪ್ಪೆಗಳು ಇದರ ಜೊತೆಗೆ ಕಾಡಿನಲ್ಲಿ ಕಾಣುವ ಅಪರೊಪದ ವನ್ಯ ಪ್ರಾಣಿಗಳಾದ ಹುಲಿ, ಕಪ್ಪು ಚಿರತೆ, ಕಾಳಿಂಗ ಸರ್ಪ, ಸಿಂಘಲಿಕ, ಕಾಡೆಮ್ಮೆ, ಜಿಂಕೆ, ಕಡವೆ ಮುಂತಾದ ವನ್ಯ ಪ್ರಾಣಿಗಳ ಸಂದರ್ಶನ  ಜೀವನದಲ್ಲಿ ಮರಯೆಲಾಗದ ಅನುಭವನ್ನು ನೀಡುತ್ತದೆ. ಒಮ್ಮೆ ಇವುಗಳನ್ನು ನೋಡಿದಲ್ಲಿ ಯಾರು ಸಹ ಅವರ ಜೀವನದಲ್ಲಿ ಮರೆಯದೆ, ಪುನಃ ಪುನಃ ಅವರವರ ಅನುಭವ ಹಂಚಿಕೊಳ್ಳುವುದೇ ವಿಶೇಷ ಅನುಭವವಾಗುತ್ತದೆ. ಬಹಳಷ್ಟು ಪ್ರವಾಸಿಗರು ಇಷ್ಟೆಲ್ಲ ಅದ್ಭುತವಾದ  ಕಾಡಿನಲ್ಲಿ ಸಂಚರಿಸಿದರೂ ಸಹ ವನ್ಯ ಪ್ರಾಣಿಗಳು ನೋಡಲು ಸಿಗಲಿಲ್ಲವೆಂಬ ಕೊರಗಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಸ್ಥಳೀಯ ಗೈಡ್ ಗಳು ಅರಣ್ಯದ ಹಾಗು ಅರಣ್ಯದಲ್ಲಿರುವ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದವರಾಗಿದ್ದರೆ , ಇಂತಹ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಅಂದರೆ ಅರಣ್ಯವೆಂದರೆ ಕೇವಲ ದೊಡ್ಡ ದೊಡ್ಡ ಮರಗಳು , ಪ್ರಾಣಿಗಳಷ್ಟೇ ಅಲ್ಲ,ಅಲ್ಲಿರುವ ಪ್ರತಿಯೊಂದು ಬಳ್ಳಿ ಪೊದೆ, ಕ್ರಿಮಿ ಕೀಟಗಳು, ದೊರೆಯುವ ಔಷಧೀಯ ಸಸ್ಯಗಳು, ಜೇನು, ಕೀಟದ ಗೂಡುಗಳು ಪಕ್ಷಿಗಳ ವಾಸ ಸ್ಥಳಗಳ ಪರಿಚಯ , ನೀರಿನ ಝುರಿಯ ಪರಿಚಯ , ಬಿದಿರು, ಬೆತ್ತ, ರೀಡ್ಸ್ ಪರಿಚಯ, ಹುತ್ತದ ಮಹತ್ವ ಇವೆಲ್ಲವುಗಳ ಪರಿಚಯದೊಂದಿಗೆ ಜೀವ ವೈವಿಧ್ಯತೆಯ ಮಹತ್ವ ವನ್ನು ಸಾರಿ ಹೇಳುವಂತ ಮಾರ್ಗದರ್ಶಕರ ಅವಶ್ಯಕತೆಯಿದೆ .  ಇದರಿಂದ ಬಹಳಷ್ಟು ನಿರುದ್ಯೋಗಿ ಯುವಕರು ಉದ್ಯೋಗವನ್ನು ಪಡೆದು ಸ್ಥಳೀಯ ಅರಣ್ಯದ ರಕ್ಷಣೆಗೆ ಪಣ ತೊಡಬಹುದಾಗಿದೆ. ಇದರಿಂದ ಪ್ರವಾಸಿಗರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಿಸರ ಸಂರಕ್ಷಣೆಗೆ ಕೈ ಗೂಡಿಸುವಂತೆ ಮಾಡಿ ವಿಶ್ವದಲ್ಲಿ ಏರುತ್ತಿರುವ ವಾತಾವರಣ ಉಷ್ಣತೆಯನ್ನು ಕಡಿಮೆಗೊಳಿಸುವಲ್ಲಿ ಪರಿಸರ ಪ್ರವಾಸಿಗರ ಪಡೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಬಹುದು.

 

Yana
ಯಾವ ಉದ್ಯಮಕ್ಕೂ ಕಡಿಮೆಯೆನಿಸದ ಪ್ರವಾಸೋದ್ಯಮ, ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ, ಅರಣ್ಯ ಮತ್ತು ಪರಿಸರ ರಕ್ಷಣೆ ಗೋಸ್ಕರ ಪ್ರವಸೋಧ್ಯಮದ ಅಭಿವೃಧಿಗೆ ಹೆಚ್ಚಿನ ಒತ್ತನ್ನು ನೀಡುವುದು ಜಿಲ್ಲೆಯ ಜನತೆಯ ಕರ್ತವ್ಯಗಳಲ್ಲಿ ಒಂದಾಗಬೇಕಿದೆ. ಹಸಿರಿನ ಮಧ್ಯದಲ್ಲಿ ನಡೆಸಬಹುದಾದ ಬೃಹತ್ ಉದ್ಯಮದ ಬೆಳವಣಿಗೆ ಜಿಲ್ಲೆಯ ಅಭಿವೃಧಿಗೆ ಮಹತ್ವದ ಕಾಣಿಕೆಯಾಗಲಿದೆ. ಇದು ಜಿಲ್ಲೆಯಲ್ಲಿರುವ ಜೀವ ವಿವಿಧ್ಯತೆಯ ರಕ್ಷಣೆಗೆ, ನೆಲ-ಜಲದ ರಕ್ಷಣೆಗೆ ಮಹತ್ವದ ಕೊಡುಗೆಯಾಗಲಿದೆ.

ಜಲಪಾತಗಳ ಜಿಲ್ಲೆ 

Magod waterfalls
ಅರಣ್ಯದ ಮಧ್ಯದಲ್ಲಿ ಧುಮ್ಮಿಕ್ಕುವ ಜಲಪಾತಗಳು ಅನೇಕ. ಸಾತೊಡ್ಡಿ, ಮಾಗೋಡ್, ಉಂಚಳ್ಳಿ, ಗಣೇಶ್ ಫಾಲ್ಸ್ ,  ವಜ್ರ ಜಲಪಾತ, ಲಾಲ್ ಗುಳಿ, ಅಣಶಿ ಜಲಪಾತಗಳು ಉಲ್ಲೇಖನೀಯ ವಾಗಿವೆ. ವರ್ಷದ ಸದಾ ಕಾಲದಲ್ಲಿ ಕೆಲವು ಧುಮುಕಿದರೆ, ಮಳೆಗಾಲ ದಲ್ಲಿ ಜಿಲ್ಲೆಯ ಯಾವುದೇ ಜಾಗದಲ್ಲಿ ಪ್ರಯಾಣಿಸಿದರು ಒಂದಲ್ಲ ಒಂದು ಜಲಪಾತಗಳನ್ನು ನೋಡಲು ಸಾಧ್ಯ. ಆದುದರಿಂದ ಈ ಜಿಲ್ಲೆಯನ್ನು "ಜಲಪಾತಗಳ" ಜಿಲ್ಲೆಯಂದು ಕರೆಯಬಹುದು. ಪ್ರವಾಸಿಗರ ಅನುಕೂಲಕ್ಕಾಗಿ  ಬೇಕಾದ ಸೌಕರ್ಯ ಗಳನ್ನೂ ಕಲ್ಪಿಸಿಕೊಡುವುದು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತೆದೆ. ಇವುಗಳ ಸಮೀಪವಿರುವ ಗ್ರಾಮದ ಜನರು ಸರಳ, ಸುಂದರ, ಸ್ವಚ್ಛ ವಸತಿ ವ್ಯವಸ್ಥೆ ಕಲ್ಪಿಸಿ, ಸ್ಥಳೀಯ ಆಹಾರವನ್ನು ನೀಡುವ ವ್ಯವಸ್ಥೆಯಾದಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಭೇಟಿ ನೀಡುವರು. ಬಂದಂತಹ ಪ್ರವಾಸಿಗರಿಗೆ ಜಲಪಾತದ ಮಹತ್ವ, ಸುತ್ತಲಿನ ಅರಣ್ಯ ಪ್ರದೇಶದ ಬಗ್ಗೆ ಮಾಹಿತಿ ನೀಡುವುದರಿಂದ ಮನಸಿನ ಉಲ್ಲಾಸದ ಜೊತೆಗೆ ಅರಣ್ಯ ಮತ್ತು ಪರಿಸರದ ಮಾಹಿತಿ, ಜಲಾನಯನ ಪ್ರದೇಶದ ರಕ್ಷಣೆಯ ಬಗ್ಗೆ ತಿಳುವಳಿಕೆ, ಜೀವ ವೈವಿಧ್ಯತೆಯ ಪರಿಚಯ ಪ್ರವಾಸಿಗರನ್ನು ಅಧ್ಯಯನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರಕೃತಿಯು "ತೆರದ ಪುಸ್ತಕ" ವೆನ್ನುವ ಮಾತನ್ನು ಸಾಕಾರ ಗೊಳಿಸಲು ವಿಪುಲ ಅವಕಾಶಗಳಿವೆ. ಇದು ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಿ ತನ್ಮೂಲಕ ಜಿಲ್ಲೆಯ ಅರಣ್ಯ ರಕ್ಷಣೆಯ ಜೊತೆಗೆ, ಪ್ರವಾಸಿಗರಲ್ಲೂ ಅರಣ್ಯ ಪರಿಸರದ ರಕ್ಷಣೆಯೊಂದಿಗೆ ಜೀವ ವೈವಿಧ್ಯತೆಯ ಸಂದೇಶವನ್ನು ಸಾರಲು ಸಾಕಾರ ವಾಗುತ್ತದೆ. ವರ್ಷಗಳು ಕಳೆದಂತೆ ಪ್ರವಾಸೋದ್ಯಮದಿಂದ ಆದಾಯ ಹೆಚ್ಚಿದಂತೆ ಆಯಾ ಭಾಗದ ಗ್ರಾಮೀಣ ಜನರ ಅರ್ಥಿಕ ಪರಿಸ್ಥಿತಿಯು ಹೆಚ್ಚುವುದರೊಂದಿಗೆ ಅಭಿವೃದ್ಧಿ ಕಾಣಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪ್ರವಾಸೋದ್ಯಮ ಒಂದಕ್ಕೊಂದು  ಪೂರಕವಾಗಿ ಸಾಗಬೇಕಿದೆ. ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲೆಯ ವಿಶೇಷತೆಯ ಬಗ್ಗೆ ಪ್ರಚಾರ ನೀಡುವ ಕೆಲಸವಾಗ ಬೇಕಿದೆ. ಜಿಲ್ಲೆಯಲ್ಲಿ ಏನೆಲ್ಲಾ ಇದೆಯೆಂದು ಹೊರಗಿನ ಜನರಿಗೆ ತಿಳಿಸುವ ಕೆಲಸವಾದಾಗ, ಪ್ರವಾಸಿಗರಿಗೆ ದೊರೆಯುವ ಅನುಕೂಲಗಳ ಬಗ್ಗೆ ಪರಿಚಯಿಸಿದಾಗ, ಪ್ರವಾಸೋದ್ಯಮದ ಬೆಳೆವಣಿಗೆಯಾಗುತ್ತದೆ. ತನ್ಮೂಲಕ ಗ್ರಾಮೀಣಾಭಿವೃದ್ಧಿಗೆ ನಾಂದಿಯಾಗಲಿದೆ.
೨೦೦೭ ಕರ್ನಾಟಕ ವಿಕಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

No comments:

Post a Comment