Pages

Friday, December 17, 2010

ಉತ್ತರ ಕನ್ನಡ ಜಿಲ್ಲೆಯ ಗೌಳಿ ಜನಾಂಗ ಹಾಗೂ ಶುಚಿತ್ವ

ಕರ್ನಾಟಕದ ಉತ್ತರ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಗಳ ಘಟ್ಟದ ಮೇಲ್ಭಾಗದ ಅರಣ್ಯಗಳಲ್ಲಿ ಮಹಾರಾಷ್ಟ್ರ ಮೂಲದ ವನವಾಸಿಗಳು ವಾಸಿಸುತ್ತಿರುತ್ತಾರೆ. ಇವರು ಮುಖ್ಯವಾಗಿ ಎಮ್ಮೆಗಳನ್ನು ಸಾಕಿ ಅವುಗಳಿಂದ ಬಂದ ಉತ್ಪನ್ನಗಳಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜನಾಂಗದವರು ೨೧ನೇ ಶತಮಾನದಲ್ಲಿಯೂ ಸಹ ನಾಗರೀಕತೆಯಿಂದ ಸ್ವಲ್ಪ ದೂರದಲ್ಲಿರುವರೆಂದರೆ ತಪ್ಪಾಗಲಾರದು. ಇವರ ಮೂಲ ಕಸಬು ಎಮ್ಮೆಗಳನ್ನು ಸಾಕುವುದು. ಕಾಡಿನಲ್ಲಿಯೇ ವಾಸಿಸುವ ಈ ಜನಾಂಗದವರು ಎಮ್ಮೆಗಳನ್ನು ಕಾಡಿನಲ್ಲಿ ಬಿಡುತ್ತಾರೆ. ಅವುಗಳು ವಾಪಸ್ ತಾವು ವಾಸಿಸುವ ತಾಣಗಳಾದ ದೊಡ್ಡಿಗಳಿಗೆ ಬಂದಾಗ ಅವುಗಳಿಂದ ಅಲ್ಪ ಸ್ವಲ್ಪ ಹಾಲನ್ನು ಕರೆದು, ಹಾಲನ್ನು ಮಾರಿ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಇಂದೂ ಸಹ ಈ ಜನಾಂಗದಲ್ಲಿ ಓದಿದವರು ಬಹಳಷ್ಟು ಜನರಿಲ್ಲ. ಅವರಲ್ಲಿ ಹೆಚ್ಚಿನ ಜನರು ಮರಾಠಿ ಮಾತನಾಡುತ್ತಾರೆ. ಈ ಜನರಿರುವ ’ಗೌಳಿ ದೊಡ್ಡಿ’ಗಳಿಗೆ ಸರ್ಕಾರದಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಸುರಕ್ಷಿತ ಕುಡಿಯುವ ನೀರು, ಶಾಲೆಗಳು, ಆರೋಗ್ಯ ವ್ಯವಸ್ಥೆಯನ್ನು ಒದಗಿಸಲು ಹಾಗೂ ಅವರ ಕೌಶಲ್ಯ ಅಭಿವೃದ್ಧಿಗೆ ಪ್ರಯತ್ನಗಳು ಮುಂದುವರಿದಿದೆ. ಆದರೆ, ಜನರಲ್ಲಿ ಅರಿವಿನ ಕೊರತೆಯಿರುವುದರಿಂದ ಇಂತಹ ಪ್ರಯತ್ನಗಳಿಗೆ ಅಷ್ಟೇನು ಸ್ಪಂದಿಸದ ಈ ಜನರು ಇಂದೂ ಸಹ ಕಾಡಿನ ವಾಸಿಗಳಂತೆಯೇ ಜೀವನ ಸಾಗಿಸುತ್ತಿದ್ದಾರೆ. ಈ ಗೌಳಿ ದೊಡ್ಡಿಗಳು ಅರಣ್ಯದ ಮಧ್ಯದಲ್ಲಿರುವ ಅತಿಕ್ರಮಣ ಪ್ರದೇಶಗಳಾಗಿರುವುದರಿಂದ ಸರ್ಕಾರದಿಂದ ಅಭಿವೃದ್ಧಿಪಡಿಸಲು ಸಹ ಸಾಧ್ಯವಾಗುತ್ತಿಲ್ಲ. ಅಭಿವೃದ್ಧಿಪಡಿಸಿ ಕೊಟ್ಟಿರುವ ರಸ್ತೆ ಮತ್ತು ಚರಂಡಿಗಳನ್ನು ಸಹ ಸರಿಯಾಗಿ ನಿರ್ವಹಿಸುತ್ತಿಲ್ಲ. ಈ ಜನಾಂಗದವರು ಕಾಡಿನ ಮಧ್ಯದಲ್ಲಿ ವಾಸಿಸುತ್ತಿರುವುದರಿಂದ ಅಷ್ಟೇನು ಶುಚಿತ್ವದ ಮಹತ್ವವನ್ನು ತಿಳಿಯದ ಇವರ ವೈಯಕ್ತಿಕ ಸ್ವಚ್ಚತೆ ಬಗ್ಗೆ ಕೇಳುವುದೇ ಬೇಕಿಲ್ಲ. ಇವರಿಗೆ ಕಾಡೇ ಶೌಚಾಲಯವಾಗಿದೆ. ಶೌಚಾಲಯವೆಂದರೆ ಏನೆಂದು(ಸಂಡಾಸ) ಕೇಳುವ ಈ ಜನರಿಗೆ ಅರಿವು ಮೂಡಿಸುವಲ್ಲಿ ಸಂಪೂರ್ಣ ಸ್ವಚ್ಛತಾ ಆಂದೋಲನದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಲಹೆಗಾರರು ಹಾಗೂ ಸರ್ಕಾರದ ವಿವಿಧ ಹಂತದ ಸಿಬ್ಬಂದಿಗಳು ಹರ ಸಾಹಸ ಪಡಬೇಕಾಯಿತು. ಇವರು ವಾಸಿಸುವ ಸ್ಥಳಗಳಾದ ಗೌಳಿ ದೊಡ್ಡಿಗಳಿಗೆ ಭೇಟಿ ನೀಡಿದಂತಹ ವೇಳೆಯಲ್ಲಿ ಮಹಿಳೆಯರಷ್ಟೇ ಇರುತ್ತಿದ್ದರು. ಇವರುಗಳು ಬಹಳ ನಾಚಿಕೆ ಸ್ವಭಾವದವರು. ಇವರುಗಳನ್ನು ಒಂದು ಕಡೆ ಸೇರಿಸಿ, ಮರಾಠಿ ಮಾತನಾಡುವ, ಕನ್ನಡ ಭಾಷೆ ಸರಿಯಾಗಿ ಅರ್ಥವಾಗದ ಇವರಿಗೆ ಶೌಚಾಲಯದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು. ಮೊದಲು ಭೇಟಿ ನೀಡಿದ ಸಂದರ್ಭದಲ್ಲಿ ಇವರುಗಳಿಗೆ ಮೊದಲ ಪ್ರಶ್ನೆಯಾಗಿ ಕೇಳಿದ್ದು, ನಿಮ್ಮ ಬಂಧುಗಳಾದ ಕೊಲ್ಲಾಪುರದಲ್ಲಿರುವ ನಿಮ್ಮ ಸಂಬಂಧಿಗಳು ಇಲ್ಲಿಗೆ ಏತಕ್ಕಾಗಿ ಬರುತ್ತಿಲ್ಲ. ಆಗ ಅವರು ಯೋಚಿಸಿ, ಯೋಚಿಸಿ ಹೇಳಿದ ಉತ್ತರವೆಂದರೆ ನಮ್ಮಲ್ಲಿ "ಸಂಡಾಸಿಲ್ಲ", ಅದಕ್ಕೋಸ್ಕರ ಅವರು ಬರುತ್ತಿಲ್ಲವೆಂದು. ನಂತರದ ಭೇಟಿಗಳಲ್ಲಿ ಅವರುಗಳಿಗೆ ನಿಮ್ಮ ಸಂಬಂಧಿಕರು ನಿಮ್ಮ ಮನೆಗೆ ಬರುವುದು ಬೇಡವೇ ಎಂದು ಕೇಳಿದಾಗ, ಅವರು ಬರಬೇಕು ಅದಕ್ಕೆ ಸಂಡಾಸು ಬೇಕೆಂದು. ಇಷ್ಟೇ ಅಲ್ಲದೆ ವಯಸ್ಸಿಗೆ ಬಂದಂತಹ ಶಾಲೆಗೆ ಹೋಗುವ ಹೆಣ್ಣುಮಕ್ಕಳಿಂದ ಈ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಹಾಗೂ ಸರ್ಕಾರದ ವಸತಿ ನಿಲಯಗಳಲ್ಲಿ ವಾಸಿಸುವ ಮಕ್ಕಳಿಂದ ಅವರ ಪೋಷಕರಿಗೆ ತಂದೆ-ತಾಯಿಂದಿರಿಗೆ ಪತ್ರ ಬರೆಯಿಸುವ ಮೂಲಕ ಸಂಡಾಸದ ಮಹತ್ವವನ್ನು ತಿಳಿಸಲು ಪ್ರಯತ್ನ ಬಹಳ ದೊಡ್ಡ ಯಶಸ್ಸನ್ನು ಸಾಧಿಸುವಲ್ಲಿ ಸಹಾಯಕಾರಿಯಾಯಿತು. ಇಂದು ಎಲ್ಲಾ ಗೌಳಿ ದೊಡ್ಡಿಗಳಲ್ಲಿ ಗೌಳಿ ಜನಾಂಗದವರು ಸಂಡಾಸನ್ನು ಕಟ್ಟಿಕೊಂಡು ಬಳಸುತ್ತಿದ್ದಾರೆ. ಅವರೇ ಹೇಳುವಂತೆ "ನಮ್ಮ ಪರಿಸರದಲ್ಲಿ ಶೌಚಾಲಯಗಳಿರಬೇಕು. ಪರಿಸರವೇ ಶೌಚಾಲಯವಾಗಬಾರದೆಂದು.

ಆರ್ಥಿಕವಾಗಿ ಅಷ್ಟೇನು ಸ್ಥಿತಿವಂತರಲ್ಲದ ಈ ಜನರೇ ಶೌಚಾಲಯ ಕಟ್ಟಿಸಿಕೊಳ್ಳುತ್ತಿರುವುದು ನಿಜವಾಗಲೂ ಸ್ವಚ್ಚತಾ ಆಂದೋಲನಕ್ಕೆ ಯಶಸ್ಸಿನ ದಾರಿ ತೋರಿದಂತಾಗಿದೆ. ಈಗ ಮಾದರಿಯಾಗಿರುವ ಗೌಳಿಗಳು ಸ್ವಚ್ಚತಾ ದೂತರಂತೆ ಆಂದೋಲನದ ಮಾರ್ಗದರ್ಶಕರಾಗಿರುವುದು ಮಹತ್ವದ ವಿಚಾರ. ಇದರಿಂದ ಯಲ್ಲಾಪುರ ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಪ್ರಗತಿ ಸಾಧಿಸಿ "ನಿರ್ಮಲ ತಾಲ್ಲೂಕ" ಪ್ರಶಸ್ತಿಗೆ ಪ್ರಸ್ತಾವನೆ ಕಳುಹಿಸಲಾಗಿದೆ.

ಉತ್ತರ ಕನ್ನಡ ಜಿಲ್ಲೆ ತೀರ ಪ್ರದೇಶ, ಘಟ್ಟ ಪ್ರದೇಶ ಹಾಗೂ ಬಯಲು ಸೀಮೆಯನ್ನು ಹೊಂದಿರುವುದರಿಂದ ಹಾಗೂ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಯನ್ನು ಆಧರಿಸಿ ಪ್ರಗತಿ ಸಾಧಿಸಲಾಗಿದೆ. ಇದೇ ಪ್ರಯತ್ನವನ್ನು ಮುಂದುವರಿಸಿ ಜನರ ಸಹಕಾರ, ಸಹಭಾಗಿತ್ವದೊಂದಿಗೆ "ನಿರ್ಮಲ ಜಿಲ್ಲೆ"ಯನ್ನಾಗಿ ಪರಿವರ್ತಿಸುವ ಕಾರ್ಯದಲ್ಲಿ ಸಮಾಜದ ಎಲ್ಲಾ ಸ್ಥರದ ಜನರೂ ಭಾಗೀದಾರರಾಗುವುದು ಅತೀ ಮಹತ್ವದ ವಿಚಾರವಾಗಿದೆ.

ಇಂದು ಬಹಳಷ್ಟು ಜನರು ಅವರವರ ಮನೆಗಳಲ್ಲಿ ಎಲ್ಲಾ ಆಧುನಿಕ ವಸ್ತುಗಳನ್ನು ಅಂದರೆ ಟಿವಿ, ರೇಫ್ರೀಜರೇಟರ್, ಮೊಬೈಲ ಸೆಟ್, ಬೈಕ್ ಇತ್ಯಾದಿಗಳನ್ನು ಹೊಂದಿದ್ದರೂ, ವೈಯಕ್ತಿಕ ಶೌಚಾಲಯ ಹೊಂದುವ ಬಗ್ಗೆ ಇನ್ನೂ ಸಹ ಹೆಚ್ಚಿನ ಆಸಕ್ತಿವಹಿಸದೇ ಇರುವುದು ಅವರ ಚಿಂತನೆಯ ಬಗ್ಗೆ ಹಿಡಿದ ಕನ್ನಡಿಯಾಗಿರುತ್ತದೆ. ಇಂದು ದೇವಾಲಯಕ್ಕೆ ಪ್ರತಿನಿತ್ಯ ಹೋಗುವ ಜನರು ವಿರಳವಿರಬಹುದು. ಆದರೆ ಪ್ರನಿತಿತ್ಯ ಶೌಚಾಲಯಕ್ಕೆ ಹೋಗದೆ ಇರುವವರ ಸಂಖ್ಯೆಯು ಅಷ್ಟೇ ವಿರಳವೆನ್ನುವುದು ಕಟು ಸತ್ಯ. ಇದಕ್ಕಾಗಿಯೇ ಗಾಂಧೀಜೀಯವರು ಎಲ್ಲಾ ಆಲಯಗಳಿಗಿಂತ ಶೌಚಾಲಯ ನಮ್ಮ ದಿನನಿತ್ಯದ ಬದುಕಿನಲ್ಲಿ ಬಹಳ ಮಹತ್ವದ್ದಾಗಿದೆಯೆಂದಿದ್ದರು.

ವಿಶ್ವಸಂಸ್ಥೆಯವರು ಭಾರತದೇಶ ೨೦೧೨ ರ ಸುಮಾರಿಗೆ ಶೇ. ೬೦ ರಷ್ಟು ಶುಚಿತ್ವವನ್ನು ಸಾಧಿಸಬೇಕೆಂದು ತಿಳಿಸಿದೆ. ಇಂದು ಭಾರತದಲ್ಲಿ ವೈಯಕ್ತಿಕ ಶೌಚಾಲಯಗಳ ಪ್ರಮಾಣ ಸರಾಸರಿ ೩೦ ರಷ್ಟಿದೆ. ವಿಶೇಷವಾಗಿ ಗ್ರಾಮಾಂತರ ಪ್ರದೇಶ ಹಾಗೂ ಪಟ್ಟಣಗಳಲ್ಲಿರುವ ಕೊಳಚೆ ಪ್ರದೇಶಗಳಲ್ಲಿ ಶೌಚಾಲಯದ ನಿರ್ಮಾಣ ಹಾಗೂ ಬಳಕೆಯ ಬಗ್ಗೆ ಆಧ್ಯತೆಯನ್ನು ನೀಡಬೇಕಾಗಿದೆ. ಇದರಿಂದ ಆಯಾ ಪ್ರದೇಶಗಳಲ್ಲಿ ಉಂಟಾಗಬಹುದಾದ ಸಾಂಕ್ರಾಮಿಕ ರೋಗಗಳು, ಅಶುಚಿತ್ವದಿಂದ ಬರುವ ಖಾಯಿಲೆಗಳನ್ನು ನಿಯಂತ್ರಿಸುವಲ್ಲಿ ಮಹತ್ತರ ಪಾತ್ರವಹಿಸಬಲ್ಲದು. ಇದರಿಂದ ಪರಿಸರ ರಕ್ಷಣೆ ಹಾಗೂ ಜಲಮೂಲಗಳ ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

Thursday, December 16, 2010

ತಾಪಮಾನ ನಿಯಂತ್ರಣಕ್ಕೆ 'ಗ್ರೀನ್ ಪವರ್ '

ಮನುಷ್ಯನ ಬದುಕಿನ ಅವಿಭಾಜ್ಯ ಅಂಶ ’ಪವರ್’. ಈ ಪವರ್ ಅಥವಾ ’ಶಕ್ತಿ’ ಮಾನವನ ಇಂದಿನ ಎಲ್ಲಾ ಚಟುವಟಿಕೆಗಳಿಕೆ ಅತಿ ಮುಖ್ಯವಾದದ್ದು. ಇಂದು ಈ ಶಕ್ತಿಯನ್ನು ಇಂಧನಗಳಿಂದ ಪಡೆಯುತ್ತಿದ್ದೇವೆ. ವಿದ್ಯುತ್ತನ್ನು ಸಹ ಇಂಧನ ಮೂಲಗಳನ್ನು ಉಪಯೋಗಿಸಿ ಪಡೆಯಲಾಗುತ್ತಿದೆ.ಈಗಿನ ದಿನಗಳಲ್ಲಂತು ವಿದ್ಯುತ್ ಇಲ್ಲದೆ ಬದುಕನ್ನು ಸಾಗಿಸುವುದು ಕಷ್ಟವಾಗಬಹುದು. ಸಾಂಪ್ರದಾಯಿಕ ರೀತಿಯಲ್ಲಿ ವಿದ್ಯುತ್ತನ್ನು ಉಷ್ಣಸ್ಥಾವರ, ಅಣುಶಕ್ತಿ, ಅನಿಲ ಮತ್ತು ಕಲ್ಲೆಣ್ಣೆಯ ಸ್ಥಾವರಗಳಿಂದ ಹಾಗೂ ಜಲ ವಿದ್ಯುತ್ ಘಟಕಗಳಿಂದ ಉತ್ಪಾದಿಸಲಾಗುತ್ತಿದೆ. ಇದರಿಂದ ಸ್ವಾಭಾವಿಕ ಪರಿಸರಕ್ಕೆ ಸಾಕಷ್ಟು ಹಾನಿಯುಂಟುಮಾಡಿದ್ದಲ್ಲದೆ, ಭವಿಷ್ಯದಲ್ಲಿ ಬರಿದಾಗುವಂತಹ ಇಂಧನಗಳನ್ನು ಉಪಯೋಗಿಸಿ ವಿದ್ಯುತ್ ಉತ್ಪಾದಿಸುತ್ತಿರುವುದು, ಮುಂಬರುವ ವರ್ಷಗಳಲ್ಲಿ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಗಂಭೀರವಾದ ಪರಿಣಾಮವನ್ನು ಬೀರಲಿದೆ.

ಸಾಂಪ್ರದಾಯಿಕ ಮೂಲಗಳಿಂದ ವಿದ್ಯುತ್ ಪಡೆಯಲು ಪರಿಸರವನ್ನು ಹಾಗೂ ಸಾಕಷ್ಟು ಅರಣ್ಯ ಪ್ರದೇಶಗಳನ್ನು ಮುಳುಗಡೆಗೊಳಿಸಿ, ಜಲ ವಿದ್ಯುತ್‌ಗಾಗಿ ಬೃಹತ್ ಅಣೆಕಟ್ಟೆಗಳನ್ನು ನಿರ್ಮಿಸಿ ವಿದ್ಯುತ್ತನ್ನು ಪಡೆಯುತ್ತಿದ್ದೇವೆ. ಇದು ಅನಿವಾರ್ಯವಾಗಿತ್ತು. ನೆಮ್ಮೆಲ್ಲಾ ಅಭಿವೃದ್ಧಿಗೆ ವಿದ್ಯುತ್ ಅತ್ಯಾವಶ್ಯಕ ಹಾಗೂ ಅಭಿವೃದ್ಧಿಯನ್ನು ಸಾಧಿಸುವಲ್ಲಿ ಪರಿಸರಕ್ಕೆ ಹಾನಿಯುಂಟು ಮಾಡುವುದು ಸಹ ಸಹಜವಾದದ್ದೆ.

ಆದರೆ ಇನ್ನಷ್ಟು ಪರಿಸರವನ್ನು ನಾಶಪಡಿಸಿ ವಿದ್ಯುತ್ ಪಡೆಯಬೇಕಂದು ಯೋಚಿಸಬೇಕಿದೆ. ಹಾಗು ಎಲ್ಲ ಪ್ರಜ್ಞ್ಯಾವಂತರು ಚರ್ಚಿಸಬೇಕಾದ ಮಹತ್ವದ ವಿಷಯ ನಮ್ಮ ಅಭಿವೃದ್ಧಿ ಸುಸ್ಥಿರವಾಗಿರಬೇಕಾದರೆ , ಸುಸ್ಥಿರ ಪರಿಸರ ಅವಶ್ಯಕತೆಯ ಬಗ್ಗೆ  ಚಿಂತಿಸಬೇಕಿದೆ. ಇಂದು ಅರ್ಥಿಕ ಭದ್ರತೆ ಪರಿಸರ ಭದ್ರತೆ ಹಾಗು ಇಂಧನ ಭದ್ರತೆ ಬಗ್ಗೆ ಯೋಚಿಸಿ ಯೋಜಿಸುವ  ಕಾಲವಿದು. ಇಧನ್ನು ಅಂಗ್ಲ ಬಾಷೆಯಲ್ಲಿ  '3E 's ಎಂದು ಗುರುತಿಸಲಾಗಿದೆ (Energy, Ecology, Economy) ಈ ಮೂರು ಅಂಶಗಳು ಇಂಧನ ಅಭಿವೃದ್ಧಿಯಲ್ಲಿ ಅಳವಡಿಸಬೇಕಾಗಿದ್ದು ಅವು ಒಂದ್ದೆಕ್ಕೊಂದು ತೆಕ್ಕೆ ಹಾಕಿಕೊಂಡಿವೆ. ಇದನ್ನು ಗಮನಿಸಿದಾಗ ಯಾವುದೇ ಅಭಿವೃದ್ಧಿ ಪರಿಸರದ ಜೊತೆ ಜೊತೆಗೆ  ಒಂದು ಮತ್ತೊಂದನ್ನು ನಾಶಪಡಿಸದೆ, ನಾಶಪಡಿಸಿದರು ಕನಿಷ್ಠ ಪ್ರಮಾಣದಲ್ಲಿ ಪರಿಸರಕ್ಕೆ ಧಕ್ಕೆ ಉಂಟುಮಾಡಿದಲ್ಲಿ ದಲ್ಲಿ ಮಾತ್ರ ಸುಸ್ಥಿರತೆಯನ್ನು ತರಲು ಸಾಧ್ಯವಾಗಬಹುದು. ಆದುದರಿಂದ ಇಂದು ವಿದ್ಯುತ್ ಉತ್ಪಾದನ ಕ್ಷೇತ್ರದಲ್ಲಿ ಸಹ ಪರಿಸರಕ್ಕೆ ಕನಿಷ್ಠ ಹಾನಿ ಉಂಟುಮಾಡುವ ನವೀಕರಿಸಬಹುದಾದ  , ಪರಿಸರದಲ್ಲಿ ಹೇರಳವಾಗಿ ದೊರಯುವ ಮೂಲಗಳಾದ ಸೂರ್ಯನ ಶಕ್ತಿಯನ್ನು ಗಾಳಿಯ ಶಕ್ತಿಯನ್ನು ಹಾಗು ಸಣ್ಣ ಸಣ್ಣ ಜಲ ವಿದ್ಯುತ್ ಘಟಕಗಳಿಂದ ವಿದ್ಯುತ್ ಪಡಯಬಹುದಾಗಿದೆ . ಇವುಗಳ ಉತ್ಪಾದನೆಯಿಂದ ಪರಿಸರ ಮಾಲಿನ್ಯ ವಾಗಲಿ, ಭೂತಾಪಮಾನ ಏರಿಕೆಯಾಗಲಿ ,ಹಸಿರು ಮನೆ ಅನಿಲಗಳಾದ ಇಂಗಾಲದ  ಡೈ ಕ್ಸೈಡ್   ಮೀತೆನ್ ಅಥವಾ ನೈಟ್ರಸ್ ಆಕ್ಸೈಡ್ ಗಳನ್ನಾಗಲಿ  ವಾತಾವರಣಕ್ಕೆ ಸೇರಿಸುವುದಿಲ್ಲ, ಇಂತಹ ಯಾವುದೆ ಕ್ರಿಯೆ, ಚಟುವಟಿಕೆ ಅಥವಾ ಅಭಿವೃದ್ಧಿಯಿಂದ ಹಸಿರುಮನೆ ಅನಿಲಗಳು  ಸೇರ್ಪದೆಯಾಗುವುದಿಲ್ಲವೋ ಅಂತಹ ವಿದ್ಯುತ್ ಉತ್ಪಾದನೆಯನ್ನು ಹಸೀರು ವಿದ್ಯುತ್ (ಗ್ರೀನ್ ಪವರ್ )ಹಾಗು ಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನವೆಂದು ಕರೆಯಲಾಗುತ್ತೆದೆ. ಈ ಹಸಿರು ಅಥವಾ ಗ್ರೀನ್ ಎನ್ನುವ ಪದವನ್ನು ಸಸ್ಯಗಳಿಂದ ಪದಯಲಾಗಿದೆ, ಏಕೆಂದರೆ ಕೇವಲ ಬಣ್ಣದಿಂದ ಹಸಿರಾಗುವುದಲ್ಲ. ಹಸಿರು ಮನೆ ಅನೀಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸುವ ತಂತ್ರಜ್ಞ್ಯಾನವನ್ನುಸ್ವಚ್ಚ್ಹ ಅಭಿವೃದ್ಧಿ ತಂತ್ರಜ್ಞ್ಯಾನದಿಂದ (ಕ್ಲೀನ್ ಡೇವ್ಲೋಪ್ಮೆಂಟ  ಮೆಕಾನಿಸಂ) ಕರೆಯಲ್ಪಟ್ಟಿದೆ. ಇಂತಹ ತಂತ್ರಜ್ಞ್ಯಾನದಿಂದ ಉತ್ಪಾದನೆಯಾಗುವ ವಸ್ತುಗಳಾಗಬಹುದು  , ಚಟುವಟಿಕೆಯಿರಬಹುದು ಇಂತಹದಕ್ಕೆ ಹಸಿರು ಪದವನ್ನು ಸೇರಿಸಿ ಬಳಕೆ ಯಲ್ಲಿ ತರಲಾಗಿದೆ. ಉದಾ: ಹಸಿರು  ವಿದ್ಯುತ್, ಹಸಿರು ಅಭಿವೃದ್ಧಿ, ಹಸಿರು ಸಾರಿಗೆ ..ಇತ್ಯಾದಿಗಳು

ಇಂಧನ ಉಳಿತಾಯ: ೧. ನವೀಕರಿಸಬಹುದಾದ ಇಂಧನ ಬಳಕೆ ಹಾಗೂ ಇಂಧನ ಉಳಿತಾಯ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ "ಒಂದು ಯೂನಿಟ್ ವಿದ್ಯುತ್ ಉಳಿತಾಯ ಎರಡು ಯೂನಿಟ್ ವಿದ್ಯುತ್ ಉತ್ಪಾದನೆಗೆ ಸಮ" ಎನ್ನುವ ನಾಣ್ಣುಡಿಯನ್ನು ಸಾಕಾರಗೊಳಿಸಬೇಕಾದುದು ಇಂದಿನ ದಿನಮಾನಗಳಲ್ಲಿ ಬಹಳ ಮುಖ್ಯ. ನಮ್ಮ ರಾಷ್ಟ್ರದ ಒಟ್ಟು ವಿದ್ಯುತ್ ಬಳಕೆಯಲ್ಲಿ ಶೇ. ೨೦ರಷ್ಟು ಬೆಳಕಿಗಾಗಿಯೇ ವ್ಯಯವಾಗುತ್ತಿದೆ. ರಾಷ್ಟ್ರದಲ್ಲಿ ಒಟ್ಟು ಉತ್ಪಾದಿಸಲಾಗುತ್ತಿರುವ ೧೫೦೦೦೦ ಮೆ.ವಾ. ವಿದ್ಯುತ್‌ನಲ್ಲಿ ಇಂಧನ ಉಳಿತಾಯ ಒಂದರಿಂದಲೇ ಶೇ. ೨೫ರಷ್ಟು ವಿದ್ಯುತ್ ಉಳಿಸಲು ಸಾಧ್ಯವಾಗುವುದು. ಕನಿಷ್ಠ ೨೫೦೦೦ ದಿಂದ ೩೦೦೦೦ ಮೆ.ವಾ. ವಿದ್ಯುತ್ ಉಳಿಸಬಹುದೆಂದು ಅಂದಾಜಿಸಲಾಗಿದೆ.

೨. ವಿದ್ಯುತ್ ಉಳಿತಾಯ ನಮ್ಮ ಜೀವನ ಶೈಲಿಯ ಮೇಲೆ ಅವಲಂಬಿತವಾಗಿದೆ ಸಾಮಾನ್ಯವಾಗಿ, ಹೆಚ್ಚಿನ ಬೆಳಕು ಹಾಗೂ ಗಾಳಿ ಇರುವ ಮನೆಗಳಲ್ಲಿ ಹಗಲಿನ ಸಮಯದಲ್ಲಿ ವಿದ್ಯುತ್ ಬಳಕೆಯ ಅವಶ್ಯಕತೆ ಬರುವುದಿಲ್ಲ. ಆದರೆ ಆಧುನಿಕ ಜೀವನ ಶೈಲಿಯಲ್ಲಿ ಪ್ರಾಕೃತಿಕ ಬೆಳಕಿಗೆ ತಡೆಒಡ್ಡಿ ಬೆಳಕು ಮತ್ತು ಗಾಳಿಯಿಂದ ವಂಚಿತರಾಗಿದ್ದೇವೆ. ಇದರ ಜೊತೆಗೆ ಹವಾ ನಿಯಂತ್ರಣಕ್ಕಾಗಿಯಾದರೂ ಸ್ವಾಭಾವಿಕ ಗಾಳಿ ಮತ್ತು ಬೆಳಕಿಗೆ ನಿರ್ಬಂಧವೇರಿ ಕೃತಕ ಬೆಳಕಿಗಾಗಿ ವಿದ್ಯುತ್ ಬಳಸುತ್ತಿದ್ದೇವೆ. ಇತ್ತೀಚಿಗಂತೂ ಪಟ್ಟಣ ಪ್ರದೇಶಗಳ ಮನೆಗಳ ಮಧ್ಯದಲ್ಲಿ ಹೆಚ್ಚಿನ ಸ್ಥಳವನ್ನು ಬಿಡದೇ ಕಟ್ಟುತ್ತಿರುವುದು ಸಹ ಸ್ವಾಭಾವಿಕ ಬೆಳಕಿನಿಂದ ವಂಚಿತರಾಗಲು ಕಾರಣವಾಗಿದೆ. ಜನ ಸಾಮಾನ್ಯರು ಈ ನಿಟ್ಟಿನಲ್ಲಿ ಯೋಚಿಸಿ ಎಚ್ಚರಿಕೆ ಕ್ರಮ ವಹಿಸುವುದು ಸೂಕ್ತ.

೩. ಬೆಳಕಿನ ಅವಶ್ಯಕತೆಯಿದ್ದಾಗ ಮಾತ್ರ ವಿದ್ಯುತ್ ಬಳಸುವುದನ್ನು ಮನೆಗಳಲ್ಲಿ ಮಕ್ಕಳಿಗೆ ತಿಳಿಸುವುದು ತಂದೆ-ತಾಯಿಗಳ ಮತ್ತು ಸಮಾಜದ ಜವಾಬ್ದಾರಿಯಾಗಬೇಕಾಗಿದೆ. ಅನ್ನವನ್ನು ವ್ಯರ್ಥ ಮಾಡಬಾರದು, ನೀರನ್ನು ಮಿತವಾಗಿ ಬಳಸಬೇಕು ಎಂದು ಹೇಳುವ ಸಂದರ್ಭದಲ್ಲಿ ಇವೆರಡನ್ನು ಪಡೆಯಲು ಸಹಕಾರಿಯಾಗಿರುವ ವಿದ್ಯುತ್ ಉಳಿತಾಯದ ಬಗ್ಗೆ ಗಮನಹರಿಸುವುದೂ ಸಹ ಅಷ್ಟೇ ಪ್ರಾಮುಖ್ಯವಾದದ್ದಾಗಿದೆ.

೪. ವಿದ್ಯುತ್ ಬಳಸುವ ಎಲ್ಲಾ ಗ್ರಾಹಕರು ಇನ್ ಕ್ಯಾಂಡಸೆಂಟ್ ದೀಪ (ಬುರುಡೆಬಲ್ಬ್) ಬದಲಿಗೆ ಕಾಂಪ್ಯಾಕ್ಟ್ ಫ಼್ಲೋರೋಸೆಂಟ್ ಹಾಗೂ ಎಲ್.ಇ.ಡಿ. ದೀಪಗಳನ್ನು ಉಪಯೋಗಿಸುವುದು ಸೂಕ್ತ. ಸಿ.ಎಫ಼್.ಎಲ್. ಬಲ್ಬ್‌ಗಳ ಶೇ. ೭೫ ರಷ್ಟು ವಿದ್ಯುತ್ ಬಳಸಿ ಐ.ಸಿ.ಎಲ್. ಬಲ್ಬ್‌ಗಳು ನೀಡುವ ಪ್ರಮಾಣದ ಬೆಳಕನ್ನು ನೀಡುತ್ತವೆ.

ಮನೆ-ಮನೆಗಳಲ್ಲಿ ಸಿ.ಎಫ಼್.ಎಲ್. ಬಳಕೆಯಿಂದ ಶೇ. ೨೫ ರಷ್ಟು ವಿದ್ಯುತ್ ಉಳಿಸಿ ಮನೆಗಳ ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು. ಹಾಗೂ ಹೆಚ್ಚು ವಿದ್ಯುತ್ ಬಳಸುವ ಪ್ರದೇಶಗಳಲ್ಲಿ ಶೇ. ೨೫ ರಷ್ಟು ಸಂಖ್ಯೆಯಷ್ಟು ಸಿ.ಎಫ಼್.ಎಲ್. ಬಳಸುವುದರಿಂದ ಶೇ. ೫೦ ರಷ್ಟು ವಿದ್ಯುತ್ ಬಿಲ್ ಕಡಿಮೆಗೊಳಿಸಬಹುದು.

೫. ಮತ್ತೊಂದು ವಿಧಾನವೆಂದರೆ, ಸೋಲಾರ್ ವಾಟರ್ ಹೀಟರ್‌ಗಳ ಬಳಕೆ ಸೂರ್ಯನ ಬೆಳಕನ್ನು ಉಪಯೋಗಿಸಿ ನೀರನ್ನು ಬಿಸಿಮಾಡುವ ಉಪಕರಣವೇ ಸೋಲಾರ್ ವಾಟರ್ ಹೀಟರ್. ಬಿಸಿನೀರನ್ನು ಮನೆಗಳಲ್ಲಿ ಸ್ನಾನ ಮಾಡಲು ಮತ್ತು ಇತರೆ ಗೃಹಬಳಕೆಗೆ ಉಪಯೋಗಿಸಲಾಗುತ್ತಿದೆ.

೧೦೦ ಲೀ ಸಾಮರ್ಥ್ಯದ ಒಂದು ಸೋಲಾರ್ ವಾಟರ್ ಹೀಟರ್ ೫ ಜನರ ಕುಟುಂಬಕ್ಕೆ ಸಾಕಾಗುತ್ತದೆ. ಇದರ ಉಪಯೋಗದಿಂದ ಮನೆಗಳಲ್ಲಿ ಪ್ರತೀ ನಿತ್ಯ ೩ ಕಿ.ವಾ. ವಿದ್ಯುತ್  ಉಳಿತಾಯ  ಮಾಡಬಹುದು ಹಾಗೂ ವಾರ್ಷಿಕವಾಗಿ ೧೫೦೦ ಕಿ.ವಾ. ವಿದ್ಯುತ್ ಉಳಿಸಬಹುದಾಗಿದೆ. ಇವುಗಳನ್ನು ಮನೆಗಳಲ್ಲಿ ಅಳವಡಿಸಲು ತಗಲುವ ವೆಚ್ಚವನ್ನು ಮೂರರಿಂದ ಐದು ವರ್ಷಗಳಲ್ಲಿ ಹಿಂಪಡೆಯಬಹುದು. ನಂತರದ ವರ್ಷಗಳಲ್ಲಿ ಉಚಿತವಾಗಿ ಅಂದರೆ ಸುಮಾರು ೧೫-೨೦ ವರ್ಷಗಳು ಪಡೆಯಬಹುದಾಗಿದೆ.

ಸೋಲಾರ್ ವಾಟರ್ ಹೀಟರ್‌ಗಳನ್ನು ಮನೆಗಳ ಚಾವಣಿಯ ಮೇಲೆ ಅಳವಡಿಸುವುದು ಸೂಕ್ತ. ಒಂದುವೇಳೆ ಸ್ಥಳದ ಅಭಾವವಿದ್ದಲ್ಲಿ ಕಿಟಕಿಗಳ ಸಮೀಪ ಸಹ ಅಳವಡಿಸಬಹುದು. ಇವುಗಳ ನಿರ್ವಹಣೆ ಸುಲಭವಾಗಿದ್ದು ಅಳವಡಿಸಲು ೨ ಚ.ಮೀ. ಸ್ಥಳಾವಕಾಶ ಬೇಕಾಗುತ್ತದೆ. ೧೦೦ ಲೀಟರ್ ಸಾಮರ್ಥ್ಯದ ಸೋಲಾರ್ ವಾಟರ್ ಹೀಟರ್‌ನ ಬೆಲೆ ಮಾರುಕಟ್ಟೆಯಲ್ಲಿ ರೂ. ೧೮೦೦೦/- ದಿಂದ ರೂ. ೨೫೦೦೦/- ಇವುಗಳನ್ನು ಅಳವಡಿಸಲು ತಗಲುವ ಪ್ರಾರಂಭಿಕ ವೆಚ್ಚವನ್ನು ಸರಿದೂಗಿಸಲು ಶೇ. ೫ ರಷ್ಟರ ಸರಳಬಡ್ಡಿ ದರದಲ್ಲಿ ಸಾಲದ ಸೌಲಭ್ಯವನ್ನು ಯಾವುದೇ ರಾಷ್ಟ್ರೀಕೃತ ಬ್ಯಾಂಕುಗಳಿಂದ ಪಡೆಯಬಹುದು.ಇದರ ಜೊತೆಗೆ ರಾಜ್ಯ ಸರ್ಕಾರದಿಂದ ಮಾಸಿಕವಾಗಿ ಪ್ರತಿ ಯೂನಿಟ್‌ಗೆ ವಿದ್ಯುತ್ ಬಳಕೆಯ ಮೇಲೆ ರೂ. ೫೦ ಪೈಸೆಯಂತೆ ರೂ. ೫೦/- ಮಾಸಿಕ ಬಿಲ್‌ನಿಂದ ಕಡಿತಗೊಳಿಸಲಾಗುತ್ತಿದೆ. ಇಂದು ಇವುಗಳ ಬಳಕೆಯನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ.

ಸೋಲಾರ್ ವಾಟರ್ ಹೀಟರ್‌ನ್ನು ಆಸ್ಪತ್ರೆಗಳು, ನರ್ಸಿಂಗ್ ಹೋಂಗಳು, ಹೋಟೆಲ್‌ಗಳು, ಮಾಲ್‍ಗಳು, ವಸತಿ ನಿಲಯಗಳು ಕ್ಯಾಂಟೀನ್‌ಗಳು, ವಸತಿ ಶಾಲೆಗಳು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಅಳವಡಿಸುವುದರಿಂದ ಗಣನೀಯವಾಗಿ ವಿದ್ಯುತ್ ಉಳಿಸಬಹುದಾಗಿದೆ.
ಜೊತೆಗೆ ಅಂತಹ ಸಂಸ್ಥೆಗಳ ವಿದ್ಯುತ್ ಬಿಲ್‌ಗಳು ಸಹ ಕಡಿಮೆಯಾಗುತ್ತದೆ. ಇಂತಹ ಸಂಸ್ಥೆಗಳಿಗೆ ಪ್ರತಿ ಚ.ಮೀ.ಗೆ ರೂ. ೧೭೫೦/- ಸರ್ಕಾರದಿಂದ ಸಹಾಯಧನ ಲಭ್ಯವಿದೆ. ಹೌಸಿಂಗ್ ಕಾಂಪ್ಲೆಕ್ಸ್‌ಗಳಿಗೂ ರೂ. ೧೯೦೦ ಚ.ಮೀ.ಗೆ ಪಡೆಯಬಹುದು.

ಇಂಧನ ಉಳಿತಾಯ ಹಾಗೂ ನವೀಕರಿಸಬಹುದಾದ ಇಂಧನ ಮೂಲಗಳ ಬಳಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಂದು ಮತ್ತೊಂದಕ್ಕೆ ಪೂರಕವಾಗಿ ಕಾರ್ಯ ನಿರ್ವಹಿಸುವುದರಿಂದ ಹಾಗೂ ವಾತಾವರಣಕ್ಕೆ ಯಾವುದೇ ರೀತಿಯ ಇಂಗಾಲ ಆಮ್ಲದ ಹೊರ ಸೂಸುವಿಕೆಯಿಲ್ಲದೇ ಇರುವುದು ಮಹತ್ವದ ವಿಚಾರವಾಗಿದ್ದು, ಕಡಿಮೆ ಇಂಗಾಲ ಅಥವಾ ಲೋ ಕಾರ್ಬನ್ ತಾಂತ್ರಿಕತೆಯಾಗಿದೆ.
ಇಂದು ವಿಶ್ವವ್ಯಾಪಿ ೮ ಬಿಲಿಯನ್ ಟನ್ ಇಂಗಾಲ ಆಮ್ಲ ಉತ್ಪತ್ತಿಯಾಗುತ್ತಿದ್ದು, ನಮ್ಮ ಭೂಮಿಯು ಕೇವಲ ೩.೧ ಬಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್ ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ರೀತಿಯಾಗಿ ಬಾಕಿ ಉಳಿಯುವ ಇಂಗಾಲ ಆಮ್ಲ ನಮ್ಮ ವಾತಾವರಣದಲ್ಲಿ ಶೇಖರಗೊಂಡು ಭೂ ತಾಪಮಾನ ಏರಿಕೆಗೆ ಕಾರಣವಾಗುತ್ತಿದೆ.
(ಪ್ರಜಾವಾಣಿ ದಿನಪತ್ರಿಕೆಯಲ್ಲಿ  14-05-2010 ಪ್ರಕಟವಾದ ಲೇಖನ )

Tuesday, December 14, 2010

ಜೋಯಿಡಾ ಪ್ರದೇಶಿಕ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು

ಉತ್ತರ ಕನ್ನಡ ಜಿಲ್ಲೆಯ ಉತ್ತರಕ್ಕಿರುವ ಜೋಯಿಡಾ ತಾಲ್ಲೂಕು ರಾಜ್ಯದ ಗಡಿನಾಡು ತಾಲ್ಲೂಕುಗಳಲ್ಲಿ ಒಂದಾಗಿದೆ. ತಾಲ್ಲೂಕಿನ ಉತ್ತರಕ್ಕೆ ಮತ್ತು ಪಶ್ಚಿಮಕ್ಕೆ ಗೋವಾ ರಾಜ್ಯದ ಗಡಿಗೆ ಹೊಂದಿಕೊಂಡಂತೆ ಇರುವ ಪಶ್ಚಿಮಘಟ್ಟದ ಮೇಲ್ಭಾಗದ ತಾಲ್ಲೂಕಾಗಿರುವ ಜೋಯಿಡಾ ಅಪಾರವಾದ ಪ್ರಾಕೃತಿಕ ಶ್ರೀಮಂತಿಕೆಯನ್ನು ಹೊಂದಿರುವ ಪ್ರದೇಶವಾಗಿದ್ದು, ವಿಸ್ತಾರದಲ್ಲಿ ರಾಜ್ಯದ ಎರಡನೇ ಅತೀ ದೊಡ್ಡ ತಾಲ್ಲೂಕ್ (೧೮೮೦ ಚ.ಕಿ.ಮೀ). ಜೋಯಿಡಾ ತಾಲ್ಲೂಕಿನ ಕೇಂದ್ರ ಸ್ಥಾನವಾಗಿದ್ದ ’ಸೂಪಾ’ ಇಂದು ಸೂಪಾ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾಗಿದ್ದು, ಜೋಯಿಡಾ ಈಗಿನ ತಾಲ್ಲೂಕ್ ಕೇಂದ್ರವಾಗಿದೆ. ತಾಲ್ಲೂಕ್ ಕೇಂದ್ರವಾಗಿರುವ ಜೋಯಿಡಾ ಇಂದು ಸಹ ಗ್ರಾಮ ಪಂಚಾಯ್ತಿಯ ಕೇಂದ್ರವಾಗಿಯೇ ಮುಂದುವರಿದಿದೆ. ಭೂಭಾಗದ ಶೇಕಡಾ ೮೭% ರಷ್ಟು ಅರಣ್ಯ ಪ್ರದೇಶವನ್ನು ಹೊಂದಿರುವ ಪಶ್ಚಿಮಘಟ್ಟಗಳ ಶ್ರೇಣಿಯಲ್ಲಿರುವ ಅರಣ್ಯದ ತಾಲ್ಲೂಕ್ ಎಂದೆ ಪ್ರಖ್ಯಾತವಾಗಿರುವ ಪ್ರದೇಶವಾಗಿದೆ. ರಾಜ್ಯದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳವು ವಿಶ್ವದ ೧೮ ಜೀವ ವೈವಿಧ್ಯತಾ ತಾಣಗಳಲ್ಲಿ ಒಂದಾಗಿದ್ದು, ಅತೀ ಮನಮೋಹಕ ಜಲಧಾರೆ (ವಾಟರ್ ಫಾಲ್ಸ್) ಗಳನ್ನು ಹೊಂದಿದ್ದು ಸುಂದರವಾದ ಮನಮೋಹಕ ಪ್ರಾಕೃತಿಕ ಸೊಬಗನ್ನು ಹಾಗೂ ಅನೇಕ ಅತೀ ಮಹತ್ವದ ವನ್ಯಜೀವಿಗಳಿಂದ ಮತ್ತು ಸಸ್ಯ ರಾಶಿಗಳಿಂದ ಕೂಡಿರುವ ಪ್ರಾಕೃತಿಕ ಖಣಜವೆನಿಸಿದೆ. ಇಂತಹ ಪ್ರದೇಶದಲ್ಲಿ ಅಭಿವೃದ್ದಿ ಹಾಗೂ ಪರಿಸರ ಸಂರಕ್ಷಣೆ (ಅರಣ್ಯ) ಜೊತೆಗೂಡಿ ಸಾಗಬೇಕಿದೆ.

ಕೃಷಿ ಕ್ಷೇತ್ರದಲ್ಲಿ ’ಭತ್ತದ ಖಣಜವೆಂದು’ ಹೆಸರುವಾಸಿಯಾಗಿದ್ದ ಸೂಪಾ ತಾಲ್ಲೂಕು ಇಂದು ಅಣೆಕಟ್ಟೆಯ ನಿರ್ಮಾಣದೊಂದಿಗೆ ಭತ್ತ ಬೆಳೆಯುವ ಪ್ರದೇಶ ಕಡಿಮೆಯಾಗಿದೆ. ಆದರೂ ಸಹ ಇಲ್ಲಿಯ ಜನರ ಬದುಕಿಗೆ ಆಸರೆಯಾಗಿರುವುದು ಭತ್ತದ ಕೃಶಿ, ಕಡಿಮೆ ಜನಸಂಖ್ಯೆ ವಿರಳವಾಗಿರುವ   ಗ್ರಾಮಗಳು ಮತ್ತು ಮಜರೆಗಳು ಹಾಗೂ ಇಲ್ಲಿರುವ ಕುಣಬಿ, ಗೌಳಿ, ಸಿದ್ದಿ ಜನಾಂಗದವರು ತಮ್ಮ ಬದುಕಿಗಾಗಿ ಕೃಷಿಯನ್ನು ಅವಲಂಬಿಸಿದ್ದಾರೆ. ಅರಣ್ಯ ಮಧ್ಯದಲ್ಲಿ ಅಲ್ಲಲ್ಲೇ, ಕಂಡುಬರುವ ಕೃಶಿ ಭೂಮಿಯಲ್ಲಿ ಬೆಳೆದ ಭತ್ತ ಸುವಾಸನೆ ಭರಿತವಾಗಿದ್ದು, ರಾಸಾಯನಿಕ ಗೊಬ್ಬರವನ್ನು ಬಳಸದೇ ಬೆಳೆಯುವ ಸಾವಯವ ಕೃಷಿ ಬೆಳೆಯಲಾಗಿರುತ್ತದೆ. ಹಿಂದೆ ಅರಣ್ಯದ ಮಧ್ಯದಲ್ಲಿ ಕುಮರಿ ಬೇಸಾಯ ಪದ್ದತಿಯಿಂದ ರಾಗಿ ಬೆಳೆಯಲಾಗುತ್ತಿತ್ತು. ಆದರೆ ಈಗ ಈ ಪದ್ದತಿಯು ರೂಢಿಯಲ್ಲಿರುವುದಿಲ್ಲ. ಇರುವ ಅಲ್ಪ ಸ್ವಲ್ಪ ಕೃಷಿ ಭೂಮಿಯಲ್ಲಿ ಭತ್ತದ ಬೆಳೆಯೊಂದಿಗೆ ತೋಟದ ಬೆಳೆಗಳಾದ  ಬಾಳೆ, ಕಾಳು ಮೆಣಸು ವಿವಿಧ ಬಗೆಯ ತರಕಾರಿ, ಹೂ, ಹಣ್ಣುಗಳನ್ನು ಮಳೆಗಾಲದಲ್ಲಿ ಜೀವನ ಸಾಗಿಸಲು ಬೆಳೆಯುತ್ತಾರೆ. ಇವೆಲ್ಲವೂ ಒಂದು ರೀತಿಯ ಸಾವಯವ ಕೃಷಿಗೆ ಪೂರಕವಾಗಿದ್ದು ಮಾಲಿನ್ಯ ಯುಗದಲ್ಲಿ ಸಾವಯವ ಕೃಷಿ ಉತ್ಪಾದನೆ ಹೆಚ್ಚು ಜನಪ್ರಿಯವಾಗುವುದರಲ್ಲಿ ಅನುಮಾನವಿಲ್ಲ. ಇದು ಜನರ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿಸಲು ಸಹಕಾರಿಯಾಗಬಲ್ಲದು.

ಜೋಯಿಡಾ ತಾಲ್ಲೂಕ ವಿಸ್ತಾರದಲ್ಲಿ ಅತೀ ದೊಡ್ಡ ತಾಲ್ಲೂಕಾಗಿದ್ದರೂ, ಭೂ ಭಾಗದ ಹೆಚ್ಚಿನ ಪ್ರದೇಶ ಅರಣ್ಯದಿಂದ ಆವೃತವಾಗಿದ್ದು, ಗ್ರಾಮಗಳು ಚದುರಿದಂತೆ ದೂರ ದೂರದಲ್ಲಿರುವುದು ಮತ್ತು ಕಡಿಮೆ ಜನಸಂಖ್ಯೆ ಹೊಂದಿರುವುದರಿಂದ ಮೂಲಭೂತ ಸೌಕರ್ಯ ಕಲ್ಪಿಸುವುದು ಅಷ್ಟು ಸುಲಭದ ಕೆಲಸವಾಗಿರುವುದಿಲ್ಲ. ಜನಸಂಖ್ಯೆಯ ಆಧಾರದಲ್ಲಿ ಅಭಿವೃದ್ದಿ ಕೆಲಸಗಳಿಗೆ ಹಣದ ಹಂಚಿಕೆಯಾಗುವುದರಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟದಾಯಕವಾಗಿರುತ್ತದೆ. ಈ ಪ್ರದೇಶದಲ್ಲಿ ಅಭಿವೃದ್ದಿ ಕೆಲಸಗಳನ್ನು ಹಮ್ಮಿಕೊಳ್ಳಲು ಈಗಿರುವ ಮಾನದಂಡಗಳನ್ನು ಸಡಿಲಗೊಳಿಸಿ, ಬೇರೆಡೆ ಅನ್ವಯವಾಗುವ ಮಾನದಂಡಗಳಿಂದ ವಿನಾಯಿತಿ ನೀಡಿದಲ್ಲಿ ಮಾತ್ರ ಅಭಿವೃದ್ದಿಯನ್ನು ಸಾಧಿಸಲು ಸಾಧ್ಯವಾಗಬಹುದು. ಆದ್ದರಿಂದ ಇಂದೂ ಸಹ ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕ, ಅರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿರುವುದಿಲ್ಲ. ಈ ಪ್ರದೇಶದಲ್ಲಿ ದಟ್ಟವಾದ ಅಡವಿಯಿರುವುದರಿಂದ ನೀರಿನ ಸಮಸ್ಯೆ ತಲೆದೋರಿರುವುದಿಲ್ಲ. ಇತ್ತೀಚೆಗೆ ಜಲ ನಿರ್ಮಲ ಯೋಜನೆ ಮತ್ತು ಇತರೆ ಕುಡಿಯುವ ನೀರು ಪೂರೈಕೆ ಯೋಜನೆಯಡಿ ಝರಿ ನೀರಿನ ಸಂಪರ್ಕವನ್ನು ಪೂರೈಸುವ ಕೆಲಸವಾಗಿರುತ್ತದೆ. ಇಲ್ಲಿ ಹಿಂದಿನಿಂದಲೂ ಅರಣ್ಯದಲ್ಲಿಯ ಝರಿ ನೀರನ್ನು ಬಳಸುವ ಪದ್ದತಿ ರೂಢಿಯಲ್ಲಿರುವುದರಿಂದ ನೀರಿನ ಸಮಸ್ಯೆ ಅಷ್ಟಾಗಿ ಕಂಡುಬಂದಿರುವುದಲ್ಲ.

ಈ ತಾಲ್ಲೂಕಿನ ಎಲ್ಲಾ ಹಳ್ಳಿಗಳಿಗೆ ಮೊದಲು ಸರ್ವಋತು ಕಡಿ ರಸ್ತೆಗಳ ಅವಶ್ಯಕತೆಯಿದೆ, ಇದರ ಜೊತೆಗೆ ಮಳೆಗಾಲದಲ್ಲಿ ಹಳ್ಳ ಮತ್ತು ಹೊಳೆಗಳನ್ನು ದಾಟಲು ಕಾಲು ಸಂಕದ (ಫ಼ುಟ್ ಬ್ರಿಡ್ಜ್) ಅವಶ್ಯಕತೆ ಸಹ ಬಹಳವಾಗಿದೆ. ಮೊದಲು ಇಲ್ಲಿಯ ರಸ್ತೆಗಳಲ್ಲಿ ವಾಹನಗಳು ಓಡಾಡುವಂತಾಗಬೇಕಿದೆ. ನಂತರದ ದಿವಸಗಳಲ್ಲಿ ಎಲ್ಲಾ ರಸ್ತೆಗಳ ಡಾಂಬರೀಕರಣಕ್ಕೆ ಚಿಂತಿಸಬಹುದಾಗಿದೆ. ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಕುಡಿಯುವ ನೀರಿನ ಸಂಪರ್ಕವನ್ನು ಪ್ರತಿ ಗ್ರಾಮಗಳಿಗೆ ಕಲ್ಪಿಸುವುದರಿಂದ ಶಿಕ್ಷಣ ಮತ್ತು ಆರೋಗ್ಯ ಸೇವೆಗಳ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಇಷ್ಟೆ ಅಲ್ಲದೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅಲ್ಲದೆ ರೈತರು ಬೆಳೆದ ಬೆಳೆಗಳ ಮಾರಾಟಕ್ಕೆ ಅನುಕೂಲವಾಗುವುದರಿಂದ ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಒಟ್ಟಾರೆ ಪ್ರದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.

ಜೋಯಿಡಾ ತಾಲ್ಲೂಕ ಅಭಿವೃದ್ದಿ ಪಥದಲ್ಲಿ ಹಿಂದುಳಿದಿದ್ದರೂ ಬಹಳಷ್ಟು ’ಇಲ್ಲ’ಗಳ ಮಧ್ಯೆಯೂ ’ಏನಿದೆ’ ಎನ್ನುವುದನ್ನು ಮುಖ್ಯವಾಗಿ ಪರಿಗಣಿಸಬೇಕಾಗಿದೆ. ಅತ್ಯಂತ ಅಪರೂಪದ ಅತೀ ಹೆಚ್ಚಿನ ಅರಣ್ಯ ಪ್ರದೇಶವನ್ನು ಹೊಂದಿರುವ ಜೋಯಿಡಾ ತಾಲ್ಲೂಕಿನಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಅರಣ್ಯವೇ ತೊಡಕು ಎನ್ನುವ ಮಾತು ಕೇಳಿ ಬಂದರೂ, ಇಲ್ಲಿರುವ ಪ್ರಾಕೃತಿಕ ಸಂಪತ್ತನ್ನು ಆರ್ಥಿಕ ಉನ್ನತಿಗೆ ಬಳಸಿ ಕೊಂಡಾಗ   ವರವಾಗಿ ಪರಿಣಮಿಸುವುದರಲ್ಲಿ ಯಾವುದೇ  ಸಂಶಯವಿಲ್ಲ. ಇಂತಹ ಅದ್ಭುತವಾದ ಅರಣ್ಯ ಸಂಪತ್ತನ್ನು ಉಳಿಸಲು ಇಲ್ಲಿಯ ಜನರೇ ಕಾರಣರಾಗಿದ್ದಾರೆ. ಆದ್ದರಿಂದ ಜನರ ಯೋಗಕ್ಷೇಮ ನೋಡಿಕೊಳ್ಳುವುದು ಸಮಾಜದ, ಸರ್ಕಾರದ ಹಾಗೂ ಸಮಸ್ತ ಜನರ ಜವಾಬ್ದಾರಿಯಾಗಬೇಕಿದೆ. ಇಲ್ಲಿಯ ಜನರು ಪರಿಸರ ಪ್ರೇಮಿಗಳಾಗಿದ್ದು ನಿಜವಾದ ಪರಿಸರಾಸಕ್ತರಾಗಿರುತ್ತಾರೆ.

ಉತ್ತರಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕು  ಪ್ರವಾಸಿಗರನ್ನು ಕೈಬೀಸಿ ಕರೆಯುವ ತಾಣವಾಗಿದೆ. ಕರ್ನಾಟಕದ  ಕಾಶ್ಮೀರವೆಂದು ಪ್ರಖ್ಯಾತಿ ಹೊಂದಿರುವ ಈ ಸ್ಥಳದಲ್ಲಿ ಸುಂದರ ಕಾನನಗಳು ಮೈತುಂಬಿ ಹರಿಯುವ ಜಲಪಾತಗಳು, ಮೈನವಿರೇಳಿಸುವ ಅಣಸಿ ರಾಷ್ಟ್ರೀಯ ಉದ್ಯಾನ ಹಾಗೂ ದಾಂಡೇಲಿ ವನ್ಯಜೀವಿ ಪಾರ್ಕ್‌ಗಳು, ಭಕ್ತಿ ಭಾವವನ್ನು ಬೀರುವ ಪವಿತ್ರ ಯಾತ್ರಾ ಸ್ಥಳ ಉಳವಿಯ ಶ್ರೀ ಚನ್ನಬಸವೇಶ್ವರ ಕ್ಷೇತ್ರ ಸುತ್ತಲಿನ ಆಕಳ ಗವಿ ಅರಳಯ್ಯನ ಚಿಲುಮೆ, ವಿಭೂತಿ ಖಣಜ, ಸಿಂಧೇರಿ ರಾಕ್ಸ್, ಕಾಳೀ ನದಿ, ಡಿಗ್ಗಿಯ ಹುಲ್ಲುಗಾವಲು ಪ್ರದೇಶಗಳು ಉಲ್ಲೇಖನೀಯವಾಗಿವೆ. ಇಲ್ಲಿಯ ಭತ್ತದ ಗದ್ದೆಗಳು, ಅಡಕೆ ತೋಟಗಳು, ಅರಣ್ಯದ ಮಧ್ಯದಲ್ಲಿದ್ದು ಮಳೆಗಾಲದಲ್ಲಿ ಅತೀ ಮನಮೋಹಕವಾಗಿ ಕಾಣುತ್ತವೆ. ಇದಕ್ಕೆ ಅನುಗುಣವಾಗಿ ಗ್ರಾಮಗಳು ಹಾಗೂ ಮಜರೆಗಳು ಅರಣ್ಯದ ಮಧ್ಯದಲ್ಲಿ ಚದುರಿಕೊಂಡಿರುವುದರಿಂದ ಪ್ರವಾಸಿಗರ ಮನಸ್ಸನ್ನು ಮನಸೂರೆಗೊಳ್ಳಲಿವೆ. ಇಲ್ಲಿಯ ಕೆಲವು ಒಳಭಾಗದ ಗ್ರಾಮಗಳಿಗೆ ಭೇಟಿ ನೀಡುವುದೇ  ಒಂದು ವಿಶಿಷ್ಟ ಅನುಭವ, ಅಲ್ಲಿ ತಂಗಿದರಂತೂ ಬಣ್ಣಿಸಲಾಗದ ಅನುಭವವನ್ನು ಪಡೆಯುವರು. ಒಂದೊಂದು ಮಜರೆಯು ಪ್ರವಾಸಿಗರಿಗೆ ವಿನೂತನವಾದ ರೆಸಾರ್ಟ್‌ನಲ್ಲಿರುವಂತೆ ತೋರಬಹುದು. ಇಂತಹ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಪ್ರವಾಸೋದ್ಯಮವನ್ನು ಬೆಳೆಸಬೇಕಿದೆ.

ಪಶ್ಚಿಮಘಟ್ಟಗಳಲ್ಲಿ ಸುರಿಯುವ ಮಳೆಯನ್ನು ವೀಕ್ಷಿಸುವ ಭಾಗ್ಯ ಅದೆಷ್ಟು ಜನರಿಗಿದೆ. ಸಮುದ್ರದ ದಡದಲ್ಲೊ ಬೆಟ್ಟದ ಮೇಲಿನ ಮನೆಯಲ್ಲೋ  ಕುಳಿತು ಮಳೆಗಾಲದಲ್ಲಿ ಮಳೆ ಬರುವ ದೃಶ್ಯವನ್ನು ವೀಕ್ಷಿಸುವದೊಂದು ಅಪೂರ್ವವಾದ ಅನುಭವ, ಮೋಡಗಳು ಆಕಾಶದಲ್ಲಿ ತೇಲಿ ಬರುವ ದೃಶ್ಯ ನೋಡು ನೋಡುತ್ತಿದ್ದಂತೆ ಸುರಿಯುವ ಮಳೆಯ ಸೊಬಗನ್ನು ನೋಡಿ ಆನಂದಿಸಿದವರನ್ನೇ ಕೇಳಬೇಕು. ಅರಣ್ಯಗಳ ಮಧ್ಯದಲ್ಲಿರುವ ಅಡಕೆ ತೋಟಗಳು, ಭತ್ತದ ಗದ್ದೆಗಳು ಮಳೆಗಾಲದಲ್ಲಿ ಎಲ್ಲಿ ನೋಡಿದರೂ ಹಚ್ಚ ಹಸಿರಾಗಿದ್ದು ಮಂಜು ಮುಸುಗಿದ ವಾತಾವರಣ ನೋಡುಗನಿಗೆ ’ಇಂದ್ರಲೋಕವೇ ಧರೆಗೆ ಇಳಿದು ಬಂದಂತ ದೃಶ್ಯ’ ಮನಮೋಹಕವಾಗಿರುತ್ತದೆ. ಇಂತಹ ಒಂದು ಅಪೂರ್ವವಾದ ಸೊಬಗನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸವಾದಲ್ಲಿ ನಿಜವಾಗಲೂ ಇಲ್ಲಿರುವ ಪ್ರವಾಸೋದ್ಯಮದ ಅವಕಾಶಗಳನ್ನು ತೆರೆದಿಟ್ಟಂತಾಗಬಹುದು.

ತಾಲ್ಲೂಕಿನಾದ್ಯಂತ ಹರಡಿಕೊಂಡಿರುವ ಮಜರೆಗಳು ಸೂಪಾ ಅಣೆಕಟ್ಟೆಯ ಹಿನ್ನೀರು, ಕಾಳಿ ಕಾನೇರಿ ನದಿಗಳು ಮತ್ತು ಇತರೆ ಸಣ್ಣ ಸಣ್ಣ ಝರಿಗಳು ಇವುಗಳ ಜೊತೆಗಿರುವ ಅಪರೂಪದ ಸಸ್ಯರಾಶಿ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ತಾಣಗಳಂತಿವೆ. ಗ್ರಾಮಾಂತರ ಪ್ರದೇಶದ ಜನರು ತಾವಿರುವಲ್ಲಿಯೇ ಪ್ರವಾಸಿಗರು ತಂಗಲು ಸರಳ, ಸ್ವಚ್ಚ, ಮನೆ, ಶೌಚಾಲಯದ ವ್ಯವಸ್ಥೆ ಸ್ಥಳೀಯ ಆಹಾರದ ಪೂರೈಕೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಜಾಲವನ್ನು ಅಭಿವೃದ್ದಿಪಡಿಸುವ ಅವಶ್ಯಕತೆಯಿದೆ. ಈ ರೀತಿಯ ’ಹೊಮ್ ಸ್ಟೇ’ ಪದ್ದತಿಯನ್ನು ಜಾರಿಯಲ್ಲಿ ತಂದು ಅವುಗಳನ್ನು ಅಭಿವೃದ್ದಿಪಡಿಸಲು ಸ್ಥಳೀಯ ಜನರು ಹಾಗು ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಸಾಧ್ಯವಾಗಬಹುದು. ಸರ್ಕಾರದ ವತಿಯಿಂದ ಒಳ್ಳೆಯ ರಸ್ತೆ ಸಂಪರ್ಕ, ನೀರಿನ ವ್ಯವಸ್ಥೆ, ಪ್ರವಾಸೋದ್ಯಮ, ಅರಣ್ಯ ಇಲಾಖೆಯವರ ಸಹಾಯ, ಸಹಕಾರ ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಪ್ರವಾಸೋದ್ಯಮ ಬೆಳೆಯಬೇಕಿದೆ. ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆ, ಸ್ಥಳೀಯ ಹೋಮ್ ಸ್ಟೇ, ಸ್ಥಳಗಳ ಮಾಹಿತಿ ಅಲ್ಲಿರುವ ವ್ಯವಸ್ಥೆ ತಲುಪಲು ಇರುವ ಮಾರ್ಗ ಮತ್ತು ಎಲ್ಲಾ ರೀತಿಯ ಮಾಹಿತಿ ಜಾಲವನ್ನು ಸ್ಥಾಪಿಸಿ ನೂತನ ತಂತ್ರಜ್ಞಾನದೊಂದಿಗೆ ಅಭಿವೃದ್ದಿಪಡಿಸುವ ಅವಶ್ಯಕತೆ ಬಹಳವಾಗಿದೆ. ಸಾಮಾನ್ಯವಾಗಿ ಇಲ್ಲಿರುವ ಗ್ರಾಮಗಳು ಮತ್ತು ಮಜರೆಗಳು ಸ್ವಚ್ಚತೆಯಿಂದಿವೆ. ಸ್ಥಳೀಯ ಗ್ರಾಮ ಪಂಚಾಯತಿಗಳು ಸ್ವಲ್ಪ ಮನಸ್ಸು ಮಾಡಿ ಗ್ರಾಮದಲ್ಲಿರುವ ಎಲ್ಲಾ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿ ಗ್ರಾಮಗಳ ಕಸ ವಿಲೇವಾರಿಯನ್ನು ಸುಗಮಗೊಳಿಸಿ ನಿರ್ಮಲ ಗ್ರಾಮಗಳನ್ನಾಗಿ ಮಾಡಲು ಸಾಧ್ಯವಿದೆ. ಇದು ಪ್ರವಾಸಿಗರನ್ನು ಆಕರ್ಶಿಸಲು ಬಹಳ ಸಹಕಾರಿಯಾಗಬಲ್ಲದು. ಈಗಾಗಲೇ ಅನೇಕ ಗ್ರಾಮ ಪಂಚಾಯತಿಗಳು ನಿರ್ಮಲ ಗ್ರಾಮ ಪುರಸ್ಕಾರ ಪಡೆದಿರುವುದು ಪ್ರಶಂಸಾರ್ಹವಾಗಿದೆ. ಇದೇ ಮಾದರಿಯಲ್ಲಿ ’ನಿರ್ಮಲ ತಾಲ್ಲೂಕು’ ಪುರಸ್ಕಾರ ಪಡೆಯುವುದು ಪ್ರವಾಸೋದ್ಯಮದ ಬೆಳವಣಿಗೆಗೆ ನಾಂದಿಯಾಗಲಿದೆ. ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ದಿ ಒಂದಕ್ಕೊಂದು ಪೂರಕವಾಗಿದ್ದು ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿ ಉನ್ನತೀಕರಿಸುವಲ್ಲಿ ಹಾಗೂ ಆಯಾ ಪ್ರದೇಶದ ಅಭಿವೃದ್ದಿಗೆ ಪ್ರವಾಸೋದ್ಯಮ ಕಾಣಿಕೆಯಾಗಲಿದೆ. ತನ್ಮೂಲಕ ಸ್ಥಳೀಯ ಜನರ ಅಂದರೆ ಕುಣಬಿ, ಸಿದ್ದಿ, ಗೌಳಿ ಸಂಸ್ಕೃತಿಯ ರಕ್ಷಣೆ ಹಾಗೂ ಇದನ್ನು ಹೊರಗಿನವರಿಗೆ ಪರಿಚಯುಸುವ ಅವಶ್ಯಕತೆ ಸಹ ಬಹಳವಾಗಿದೆ.

ಇಲ್ಲಿಯ ಗ್ರಾಮಗಳಲ್ಲಿ ತಂಗಿ, ಅದರ ಸುತ್ತಲಿನ ಅರಣ್ಯದ ವೀಕ್ಷಣೆಯು ಪ್ರವಾಸಿಗರಿಗೆ ವಿಶಿಷ್ಟ ಅನುಭವವನ್ನು ನೀಡುತ್ತದೆ. ಇಂತಹ ಸುಂದರವಾದ ಅರಣ್ಯ ಪ್ರದೇಶ ಬೇರೆಲ್ಲಿಯೂ ಸಿಗಲಾರದು. ಅಣಸಿ ಗ್ರಾಮದ ಸುತ್ತಮುತ್ತಲಿನ ಅರಣ್ಯ ಪ್ರದೇಶ ಬೇಸಿಗೆಯಲ್ಲೂ ಸಹ ತಂಪಾದ ವಾತಾವರಣ ಹೊಂದಿರುವುದು ವಿಶೇಷತೆ. ಪ್ರಾಕೃತಿಕವಾಗಿ ಹವಾ ನಿಯಂತ್ರಿತ ಅರಣ್ಯ ಪ್ರದೇಶದಲ್ಲಿ ಕಾಲ್ನಡಗೆಯಿಂದ ಓಡಾಡುವುದು, ಅಲ್ಲಿರುವ ಮರಗಳನ್ನು ಪರಿಚಯಿಸಿಕೊಳ್ಳುವುದು, ವಿವಿಧ ಪಕ್ಷಿಗಳ, ಕೀಟಗಳ, ಸರಿಸೃಪಗಳ, ಕಪ್ಪೆಗಳ ವೀಕ್ಷಣೆ ಜೊತೆಗೆ ಕಾಡಿನಲ್ಲಿ ಕಂಡುಬರುವ ಅಪರೂಪದ ವನ್ಯಪ್ರಾಣಿಗಳಾದ ಹುಲಿ, ಕಪ್ಪು ಚಿರತೆ, ಕಾಳಿಂಗ ಸರ್ಪ, ಕಾಡೆಮ್ಮೆ, ಜಿಂಕೆ, ಕಡವೆ, ಮುಂತಾದ ವನ್ಯಜೀವಿಗಳ ಸಂದರ್ಶನ ಜೀವನದಲ್ಲಿ ಮರೆಯಲಾರದ ಅನುಭವವನ್ನು ನೀಡುತ್ತದೆ. ಒಮ್ಮೆ ಇವುಗಳನ್ನು ನೋಡಿದಲ್ಲಿ ಯಾರೂ ಸಹ ಅವರ ಜೀವನದಲ್ಲಿ ಮರೆಯದೆ ಮೆಲಕು ಹಾಕುವುದು ಹಾಗೂ ಇತರರೊಂದಿಗೆ ಹಂಚಿಕೊಳ್ಳುವುದೇ ಒಂದು ವಿಶಿಷ್ಟವಾದ ಅನುಭವವಾಗುತ್ತದೆ. ಬಹಳಷ್ಟು ಪ್ರವಾಸಿಗರು ಇಷ್ಟೆಲ್ಲಾ ಅಧ್ಬುತವಾದ ಕಾಡಿನಲ್ಲಿ ಸಂಚರಿಸಿದರೂ ಸಹ ವನ್ಯ ಪ್ರಾಣಿಗಳು ನೋಡಲು ಸಿಗಲಿಲ್ಲವೆಂಬ ಕೊರಗಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಸ್ಥಳೀಯ ಜನರೇ ಪ್ರವಾಸಿಗರಿಗೆ ಮಾರ್ಗದರ್ಶಕರಾಗಿ(ಗೈಡ್) ಅರಣ್ಯದ ಹಾಗೂ ಸ್ಥಳೀಯ ವೈವಿಧ್ಯತೆಯ ಬಗ್ಗೆ ಮಾಹಿತಿಯನ್ನು ನೀಡಿ ಇಂತಹ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗಬಹುದು. ಅರಣ್ಯವೆಂದರೆ ಕೇವಲ ದೊಡ್ಡ ದೊಡ್ಡ ಮರಗಳು ಪ್ರಾಣಿಗಳಷ್ಟೇ ಅಲ್ಲ ಅಲ್ಲಿರುವ ಪ್ರತಿಯೊಂದು ಗಿಡ, ಬಳ್ಳಿ, ಪೊದೆ, ಸಣ್ಣ ಸಣ್ಣ ಕ್ರಿಮಿ, ಕೀಟಗಳು ಅಪರೂಪದ ಸಸ್ಯಗಳು, ಜೇನು, ಕೀಟದ ಗೂಡುಗಳು, ಪಕ್ಷಿಗಳ ವಾಸಸ್ಥಳಗಳು, ನೀರಿನ ಝರಿ (ಜಲಪಾತಗಳು), ಬೆತ್ತ, ಬಿದಿರು, ರೀಡ್ಸ್, ಹುತ್ತ ಹೀಗೆ ಹತ್ತು ಹಲವು ಜೀವ ವೈವಿಧ್ಯತೆಯನ್ನು ಸಾರಿ ಹೇಳುವ ಗೈಡ್‍ಗಳ ಅವಶ್ಯಕತೆಯಿದೆ. ಇದರಿಂದ ಸ್ಥಳೀಯ ನಿರುದ್ಯೋಗಿ ಯುವಕರು ಉದ್ಯೋಗವನ್ನು ಪಡೆಯಲು ಸಹಕಾರಿಯಾಗುವುದೊರೊಂದಿಗೆ ಪ್ರವಾಸಿಗರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಿಗಳಿಸಿದಂತಾಗುವುದು. ಇದರಿಂದ ವಿಶ್ವದಲ್ಲಿ ಏರುತ್ತಿರುವ ವಾತಾವರಣದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಪರಿಸರ ಪ್ರವಾಸಿಗರ ಪಡೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗುವರು.

ಸ್ಥಳೀಯ ನೈಸರ್ಗಿಕ ಸಂಪನ್ಮೂಲವನ್ನು ಬಳಸಿಕೊಂಡು ಪ್ರವಾಸಿಗರ ಅನುಕೂಲಕ್ಕಾಗಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವುದು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತದೆ. ಇಲ್ಲಿರುವ ಗ್ರಾಮದ ಮಜರೆಗಳಲ್ಲಿ ಸರಳ, ಸುಂದರ ಸ್ವಚ್ಚ, ವಸತಿ ವ್ಯವಸ್ಥೆಯ ನಿರ್ಮಾಣ ಸ್ಥಳೀಯ ಆಹಾರವನ್ನು ನೀಡುವ ಪದ್ದತಿಯಾದಲ್ಲಿ ದೇಶ ವಿದೇಶದ ಪ್ರವಾಸಿಗರು ತಂಡೋಪತಂಡವಾಗಿ ಭೇಟಿ ನೀಡುವರು . ಇಂತಹ ಪ್ರವಾಸಿಗರಿಗೆ ಸುತ್ತಲಿನ ಅರಣ್ಯ ಪ್ರದೇಶ ಮತ್ತು ಜಲಪಾತಗಳ ಪರಿಚಯಿಸುವುದರಿಂದ ಮನಸ್ಸಿಗೆ ಉಲ್ಲಾಸದ ಜೊತೆಗೆ ಅರಣ್ಯ ಮತ್ತು ಪರಿಸರದ ಮಾಹಿತಿ, ಜೀವ ವೈವಿಧ್ಯತೆಯ ಪರಿಚಯ, ಜಲಾನಯನ ಪ್ರದೇಶದ ರಕ್ಷಣೆ ಬಗ್ಗೆ ತಿಳುವಳಿಕೆ ಪ್ರವಾಸಿಗರನ್ನು ಅಧ್ಯಯನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಇದರಿಂದ "ಪ್ರಕೃತಿಯು ತೆರೆದ ಪುಸ್ತಕ" ಎನ್ನುವ ಮಾತನ್ನು ಸಾಕಾರಗೊಳಿಸಬಹುದಾಗಿದೆ.

ಯಾವ ಉದ್ಯಮಕ್ಕೂ ಕಡಿಮೆಯೆನಿಸದ ಪ್ರವಾಸೋದ್ಯಮ ಗಡಿಭಾಗದ ಅಭಿವೃದ್ದಿ ದೃಷ್ಠಿಯಿಂದ ಅರಣ್ಯ ಮತ್ತು ಪರಿಸರ ರಕ್ಷಣೆಯೊಂದಿಗೆ ಹೆಚ್ಚಿನ ಒತ್ತನ್ನು ನೀಡುವುದು ಜನತೆಯ ಕರ್ತವ್ಯಗಳಲ್ಲಿ ಒಂದಾಗಬೇಕಿದೆ. ಹಸಿರಿನ ಮಧ್ಯದಲ್ಲಿ ನಡೆಸಬಹುದಾದ ಬೃಹತ್ ಉದ್ಯಮದ ಬೆಳವಣಿಗೆ, ಅಭಿವೃದ್ದಿಗೆ ಮಹತ್ವದ ಕಾಣಿಕೆಯಾಗಲಿದೆ. ಪ್ರವಾಸೋದ್ಯಮದಿಂದ ಆದಾಯ ಹೆಚ್ಚಿದಂತೆ ಆಯಾ ಭಾಗದ ಗ್ರಾಮೀಣ ಜನರ ಆರ್ಥಿಕ ಪರಿಸ್ಥಿತಿಯು ಹೆಚ್ಚುವುದರೊಂದಿಗೆ ಅಭಿವೃದ್ದಿಯ ಗತಿಯನ್ನು ಹೆಚ್ಚಿಸಲು ಸಾಧ್ಯವಾಗುವುದು.

ಪ್ರವಾಸಿಗರನ್ನು ಆಕರ್ಶಿಸಲು ಸ್ಥಳೀಯ ವಿಶೇಷತೆಯ ಬಗ್ಗೆ ಪ್ರಚಾರ ನೀಡುವ ಕೆಲಸವಾಗಬೇಕಿದೆ. ಪ್ರವಾಸೋದ್ಯಮಕ್ಕೆ ಬೇಕಾದ ಪೂರಕ ವಾತಾವರಣ, ಮೂಲಭೂತ ಸೌಕರ್ಯಗಳ ಅಭಿವೃದ್ದಿ, ಜನರ ಮನೋಭಾವದಲ್ಲಿ ಪ್ರವಾಸಿಗರನ್ನು ಆದರಾತಿಥ್ಯದೊಂದಿಗೆ ನಡೆಸಿಕೊಳ್ಳುವ ಭಾವನೆಯೊಂದಿಗಿನ ಸಹಭಾಗಿತ್ವ ಗಡಿಭಾಗದ ಆರ್ಥಿಕ ಉನ್ನತಿಗೆ ಮಹತ್ವದ ಹೆಜ್ಜೆಯಾಗಲಿದೆ.

Wednesday, December 8, 2010

ಮರಳು ಭುಮಿಯಲ್ಲೊಂದು ಅಭಿವೃಧ್ಹಿಯ ಓಯಸಿಸ್

ರಾಜಸ್ಥಾನದ ಚುರು ಮತ್ತು ವಾಗುರ್ ಜಿಲ್ಲೆಗಳಲ್ಲಿ ಥಾರ್ ಮರುಭೂಮಿ ಹರಡಿಕೊಂಡಿದೆ. ಇಲ್ಲಿ ಗಿಡ ಮರಗಳು ಎಲೆಗಳನ್ನು ಕಳೆದುಕೊಂಡು ಅಂತರ್ಜಲದ  ಮಟ್ಟ ಬಹಳ ಕೆಳೆಗಿಳಿದು ನೀರೆಲ್ಲ ಉಪ್ಪಾಗಿದೆ. ಈ ನಾಡಿನಲ್ಲಿ ಒಂಟೆಗಳು ಮತ್ತು ಚಿಂಕಾರಗಳಂತ  ಪ್ರಾಣಿಗಳಷ್ಟೇ ಕಂಡು ಬರುತ್ತವೆ. ಇಂತಹ ಪ್ರದೇಶದಲ್ಲಿ ಭಾರತದಲ್ಲಿ ಅತ್ಯಂತ ಅಭಿವೃದ್ಧಿಯಲ್ಲಿ ಯಶಸ್ಸನ್ನು  ಸಾಧಿಸಿರುವ ಗ್ರಾಮ ಪಂಚಾಯತ್ ಇದೆಯಂದರೆ ನಂಬಲು ಅಸಾಧ್ಯವೆನಿಸಬಹುದು. ಇದುವರೆಗೂ ರಾಜ್ಯ ಸರ್ಕಾರದಿಂದ  ಹೆಚ್ಚೇನು ಸಹಾಯ ದೊರೆಯದಿದ್ದರು ರಾಜಕಾರಣಿಗಳ ಬೆಳವಣಿಗೆಗೆ ಅವಕಾಶ ಕಲ್ಪಿಸುವ ತಾಣವಾಗಿ ಗ್ರಾಮ ಪಂಚಾಯತ್ಗಳು ಕಾರ್ಯನಿರ್ವಹಿಸುತ್ತಿದ್ದವು  . ಆದರೆ ಅತಿ ಹಿಂದುಳಿದ ಹಾಗು ತೀರ ಒಳಭಾಗದ ಗ್ರಾಮವಾದ ಗೋಪಾಲಪುರ 21 ನೆ ಶತಮಾನದಲ್ಲಿ ಮರುಭೂಮಿಯಲ್ಲಿಯ ಓಯಸಿಸ್ ನಂತೆ   ತೆಲೆ  ಎತ್ತಿ  ಸಾಧಿಸಿರುವುದು ಅತ್ಯಂತ ಮಹತ್ವದ ವಿಚಾರವಾಗಿದೆ. ರಾಜ್ಯದ ರಾಜಧಾನಿಯಾದ ಜಯಪುರದಿಂದ 200 k.m ದೂರದಲ್ಲಿರುವ ಗೋಪಾಲಪುರ ಗ್ರಾಮವು ಸುಜನಗರ್ ತಾಲೂಕಿನಲ್ಲಿರುವ 6000 ಜನಸಂಖ್ಯೆಯ ಗ್ರಾಮವಾಗಿದೆ . ಅಲ್ಲಿಯ ಜನರು ಈಗ ಸಜ್ಜೆ ಬೆಳೆಯಿಂದಲೇ ತಮ್ಮ ಜೀವನ ಸಾಗಿಸುತ್ತಾರೆ. ಕೆಲವರು ಕಲ್ಲಿನ ಕ್ವಾರಿಗಳಿಂದ ಮತ್ತು ಸಂಭಾರ್ ಸರೋವರದ ಬಯಲಿನಲ್ಲಿ ಉಪ್ಪು ತಯಾರಿಕಾ ಘಟಕಗಳಲ್ಲಿ ದುಡಿದು ಜೀವನ ನಡೆಸುತ್ತಾರೆ. ಇಂತಹ ಒಂದು ಪ್ರಾಕೃತಿಕವಾಗಿ ಏನೆಲ್ಲಾ ಕಷ್ಟಗಳಿದ್ದರೂ ಯಾರಾದರೂ  ಗೋಪಾಲಪುರಕ್ಕೆ ಭೇಟಿ ನೀಡಿದಲ್ಲಿ ಅವರ ಮನಸ್ಸಿನಲ್ಲಿ ನೊಂದಣಿಯಾಗುವುದು ಸ್ವಚ್ಚ್ಹ ಬೀದಿಗಳು, ಗೋಡೆಗಳ ಮೇಲೆ ಕಾಣುವ ಮಹತ್ವದ ಸಂದೆಶವೆಂದರೆ  " ಸೊಸೆಯಂದಿರೊಂದಿಗೆ ಓದೋಣ , ಎಲ್ಲ ಮಹಿಳೆಯರು ಸಾಕ್ಷರ ರಾಗೋಣ" ಸ್ವಚ್ಚ್ಹೆತೆಗೆ ಮಹತ್ವ ನೀಡೋಣ ಹಾಗು ಸಣ್ಣ ಕುಟುಂಬದ ಕಲ್ಪನೆಯೇ ಮಂತ್ರವಾಗಿದೆ. ಅಲ್ಲದೆ ನೀರಿಗೆ ಬಹಳ ಮಹತ್ವವನ್ನು  ನೀಡಲಾಗಿದೆ " ನೀರಿಲ್ಲದೆ ನಾಳೆ ಯಿಲ್ಲ " ಎನ್ನುವು ಘೋಷಣೆ ಎಲ್ಲರ ಮನ ಕುಲುಕುವ ವಿಷಯವಾಗಿದೆ.

ಸುವಿಚಾರದ  ಅಧ್ಯಕ್ಷೆಯ ಆಗಮನ:
ಮೇಲಿನ ಮಹತ್ವದ ವಿಚಾರಗಳನ್ನು ಹೊಂದಿರುವ ಗೋಪಾಲಪುರ ಗ್ರಾಮ ಪಂಚಾಯತ್  12 ಜನ ಸದಸ್ಯರನ್ನೋಳಗೊಂಡಿದೆ. ಇದರಲ್ಲಿ 5 ಜನ ಮಹಿಳೆಯರು, 6 ಜನ ಪರಿಶಿಷ್ಟ ಜಾತಿಯವರಾಗಿರುವರು. ಇಲ್ಲಿಯ ಗ್ರಾಮ ಪಂಚಾಯತ ಅಧ್ಯಕ್ಷೆ (ಸರ್ಪಂಚ್) ಶ್ರೀಮತಿ ಸವಿತಾರತಿ, ಸುಜನಗರ್ ನಲ್ಲಿರುವ ಒಂದು ಸ್ವಯಂ ಸೇವಾ ಸಂಸ್ಥೆಯಲ್ಲಿ ಕಾರ್ಯಕರ್ತೆಯಾಗಿದ್ದಳು, ಅಧ್ಯಕ್ಷೆಯಾದ ಎರಡುವರೆ ವರ್ಷಗಳಲ್ಲಿ ಗ್ರಾಮದ ನೋಟವನ್ನೇ ಬದಲಾಯಿಸಿರುವ ಖ್ಯಾತಿಗೆ  ಪಾತ್ರಳಾಗಿರುವಳು. ಗ್ರಾಮ ಪಂಚಾಯಿತ ಚುನಾವಣಾ ಸಮಯದಲ್ಲಿ ಗ್ರಾಮದ ಯಾವುದೇ ರಸ್ತೆಗಳು ಓಡಾಟಕ್ಕೆ ಯೋಗ್ಯವಾಗಿರಲಿಲ್ಲ. ಈ ಬಗ್ಗೆ ಗ್ರಾಮಸ್ಥರಿಂದ ಬಹಳಷ್ಟು ದೂರುಗಳಿದ್ದವೆಂದು ಈಗಿನ ಗ್ರಾಮ ಪಂಚಾಯತ ಸರಪಂಚೆಯಾಗಿರುವ ಶ್ರೀಮತಿ ಸವಿತಾರತಿ ಮುಗುಳ್ನಗೆಯೊಂದಿಗೆ ಹೇಳುತ್ತಾಳೆ. " ಈ ಗ್ರಾಮದ ಗಂಡು ಮಕ್ಕಳಿಗೆ ಹೆಣ್ಣು ಕೊಡುತ್ತಿರಲ್ಲಿಲ್ಲ . ಕಾರಣ ಈ ಗ್ರಾಮೆಕ್ಕೆ ಇರುವುದು  ಕಷ್ಟದ ಹಾದಿ, ಹಾಗೂ  ಅವರನ್ನು ಪುನ್ಹ ನೋಡಲು ಸಾಧ್ಯವಿಲ್ಲವೆಂದು , ಇಂದು ಇಂತಹ ಗ್ರಾಮದಲ್ಲಿ ಎರಡು ಲೇನ್  ರಸ್ತೆಇದ್ದು , ರಸ್ತೆಗಳನ್ನು ಎಲ್ಲಡೆ ತುಂಬಾ ಅಚ್ಚುಕಟ್ಟಾಗಿ ಗುಣಮಟ್ಟಕ್ಕೆ ನಿರ್ಮಿಸಲಾಗಿದೆ. ಅಲ್ಲದೆ ಅಕ್ಕ ಪಕ್ಕ ಗ್ರಾಮಗಳಿಗೆ ಹೋಗುವ ರಸ್ತೆಯನ್ನು ಸಹ ಸಮರ್ಪಕವಾಗಿ ನಿರ್ಮಿಸಲಾಗಿದೆ. ಈಗಿರುವ ಅಲ್ಲಿಯ ರಸ್ತೆಗಳ ಮೇಲ್ಮೈನ್ನು  ನಯನವಾಗಿರುವ  ಸಿನಿಮಾ ತಾರೆಯರ ಕೆನ್ನೆಗೆ  ಹೋಲಿಸಬಹುದು .

ಗ್ರಾಮದಲ್ಲಿ ರಸ್ತೆಗಳ ನಿರ್ಮಾಣದೊಂದಿಗೆ ಪ್ರಾರಂಭಿಸಿ, ನಂತರದಲ್ಲಿ ಅಂಗನವಾಡಿಗಳು, ಒಂದು ಹೊಸ ಪ್ರೌಢಶಾಲೆ  ಸಮುದಾಯ ಶೌಚಾಲಯ ಹಾಗು ಗ್ರಾಮೀಣ ಪಶು ಚಿಕಿತ್ಸಾ ಕೇಂದ್ರಗಳನ್ನು ನಿರ್ಮಿಸುವಲ್ಲಿ ಸಫಲರಾಗಿದ್ದಾರೆ. ಅಲ್ಲದೆ ಕೆಲವು ಅಂತರಿಕ ರಸ್ತೆಗಳಿಗೆ ಬೀದಿ ದೀಪಗಳನ್ನು ಅಳವಡಿಸಿದ್ದಾರೆ.  ಸುರ್ವಾ ಗ್ರಾಮದಲ್ಲಿ ಒಂದು ಸಮುದಾಯ ಭವನವನ್ನು ನಿರ್ಮಿಸಿ, ಅಲ್ಲಿಯ ಸ್ವರೋಜಗಾರಿಗಳಿಗೆ ವಿಶೇಷವಾಗಿ ಮಹಿಳ ಸ್ವಸಹಾಯ ಗುಂಪುಗಳು ಸ್ಥಳೀಯ ಕಲೆಗಳಾದ ವಿವಿಧ ತರದ ಬ್ಯಾಗ್ ಗಳ ತಯಾರಿಕೆ , ಬಾಗಿಲು ತೋರಣಗಳ ತಯಾರಿಕೆಯನ್ನು ಸ್ಥಳಿಯವಾಗಿ ದೊರೆಯುವ ಹುಲ್ಲಿನಿಂದ ತಯಾರಿಸುವ ಕಲೆಯನ್ನು ಕರಗತ ಮಾಡಿಕೊಂಡು ತಮ್ಮ ಅರ್ಥಿಕ ಮಟ್ಟವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮೊದಲು ಅಲ್ಲಿಯ ಮಹಿಳೆಯರು  ಸ್ಥಳೀಯ ಉಪ್ಪು ತಯಾರಿಕ ಘಟಕಗಳಲ್ಲಿ ದಿನವಿಡೀ ದುಡಿದು ಕೇವಲ ರೂ.30 ದಿನಗೂಲಿ ಪಡೆಯುತ್ತಿದ್ದರು.

ಈಗ  ಗೋಪಾಲಪುರ ಗ್ರಾಮ ಪಂಚಾಯತಿ ಕಟ್ಟಡ ವನ್ನು ಪುನರ್ ನಿರ್ಮಾಣ ಮಾಡಲಾಗಿದೆ ಹಾಗು ಒಂದು  ಕಂಪ್ಯೂಟರ್ ಕೊಠಡಿ ಮತ್ತು ಸಭಾ ಭವನ ನಿರ್ಮಿಸಲಾಗಿದೆ. ಅಲ್ಲಿ ತಿಂಗಳಿಗೆ ಎರಡು ಬಾರಿ ಸಭೆಗಳನ್ನು ಜನರ ಸಮ್ಮುಖದಲ್ಲಿ  ನಡೆಸುತ್ತಾರೆ. ಗ್ರಾಮ ಪಂಚಾಯತ್ ಕಚೇರಿಯಲ್ಲಿ ಬ್ರಾಡ್ ಬ್ಯಾಂಡ್, ಇಂಟರ್ನೆಟ್ ಸೌಲಭ್ಯ  ಹೊಂದಿರುವುದು ಗಮನಾರ್ಹ, ಇದರಿಂದ ಟೆಲಿಕಾನ್ಫೆರನ್ಸೆ ಮುಖಾಂತರ ಪಟ್ಟಣದಲ್ಲಿರುವ ತಜ್ಞ್ಯ ವೈದ್ಯರನ್ನು ಸಂಪರ್ಕಿಸಿ ಗ್ರಾಮ ವಾಸಿಗಳಿಗೆ ತಜ್ಞ್ಯ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಾರೆ. ಗೋಪಾಲಪುರದ ಗ್ರಾಮದ ಮಧ್ಯದಲ್ಲಿರುವ 400 ವರ್ಷಗಳಷ್ಟು ಹಳಯೆದಾದ "ದ್ರೋಣ ಪರ್ವತ ಸಂಕಲ "ದಲ್ಲಿರುವ ಮಂದಿರವನ್ನು ರೂ.20 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.

ಎಲ್ಲದಕ್ಕೂ ಮುಖ್ಯವಾದದ್ದು ನೀರು , ಇಲ್ಲಿ ಅದು ಬಹಳ ವಿರಳ "ನೀರಿಲ್ಲದೆ - ನಾಳೆಯಿಲ್ಲ " ಎನ್ನುವ ಉಕ್ತಿ ಬಹಳ ಪ್ರಾಮುಖ್ಯತೆಯನ್ನು ಪಡೆದಿದೆ. ಇಲ್ಲಿಯ ಅಂತರ್ಜಲದ  ನೀರಿನಲ್ಲಿ ಉಪ್ಪಿನದೆ ಸಮಸ್ಯೆ. ಆದುದರಿಂದ ಅಲ್ಲಿಯ ಜನರು ಬಹಳ ಶ್ರದ್ದೆಯಿಂದ ಸಿಹಿ ನೀರನ್ನು ರಕ್ಷಿಸಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸಿದ್ದಾರೆ. ಬೆಟ್ಟದ ಮೇಲಿರುವ ದೇವಸ್ಥಾನದ ಪಕ್ಕದಲ್ಲಿ ದೊಡ್ಡ ಕೆರೆಯಿದೆ, ಮೊದಲು ಈ ಕೆರೆಯನ್ನು ಸಿಹಿ ನೀರು, ಅಂದರೆ ಮಳೆಯ ನೀರನ್ನು ಸಂಗ್ರಹಿಸಲು ನಿರ್ಮಿಸಿದ್ದರು, ಆದರೆ ಅಕ್ರಮವಾಗಿ ನಡೆಯುವ ಗಣಿಗಾರಿಕೆ ಯಿಂದ ಕೆರೆಯಲ್ಲಿ ನೀರಿಲ್ಲದೆ ಒಣಗಿದ  ಅಂಗಳದಂತಾಗಿದೆ , ಸ್ಥಳೀಯ ಜನರು ಕೆರೆಯ ಮೈದಾನವನ್ನು ಫುಟ್ಬಾಲ್ ಆಡಲು  ಯೋಗ್ಯವೆಂದು ತಮಾಷೆ ಮಾಡುತಿದ್ದರು.  ಆದರೆ ಗ್ರಾಮ ಪಂಚಾಯಿತಯ  ದಿಟ್ಟ ನಿರ್ಧಾರದಿಂದ ಗಣಿಗಾರಿಕೆಯನ್ನು ನಿಲ್ಲಿಸಲಾಗಿದೆ. ಈಗ ಮಳೆಯಿಂದ ಕೆರೆ ತುಂಬಿ ತುಳುಕುತ್ತಿದ್ದು ಅಲ್ಲಿಯ ನೀರನ್ನು ಬೇರೆಯವರಿಗೆ ಮಾರಾಟ ಮಾಡುವುದನ್ನು ನಿಲ್ಲಿಸಿದ್ದಾರೆ. ಇಂತಹ ಅಚಲ ನಿರ್ಧಾರಗಳಿಂದ ಇಂದು ಕೆರೆಯು ಅಪೂರ್ವವಾದ ಕುಡಿಯುವ ನೀರಿನ ರಕ್ಷಣಾ ತಾಣವಾಗಿದೆ.

ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳನ್ನು ನಿರ್ಮಿಸುವುದು ಅಷ್ಟೇನೂ ಸುಲಭದ ಕೆಲಸವಲ್ಲ. ಒಂದು ರೀತಿಯ ಧರ್ಮಯುದ್ಧವೇ ಸರಿ . ಆದರೆ ಮತ್ತೊಂದು ಸಮರವೆಂದರೆ  ಮಾನವ ಸಂಪನ್ಮೂಲ ಅಭಿವೃದ್ಧಿ ಗ್ರಾಮದಲ್ಲಿ ಅಳವಡಿಸಿರುವ ಇಂಟರ್ ನೆಟ್ ಉಪಯೋಗಿಸುವವರು  ಯಾರು  ?  ಅದಕ್ಕಾಗಿ ಗ್ರಾಮ ಪಂಚಾಯಿತ ಶಿಕ್ಷಣಕ್ಕೆ ಬಹಳ ಮಹತ್ವ ನೀಡಲಾಗಿದೆ. ಅದರಲ್ಲೂ ಹೆಣ್ಣು ಮಕ್ಕಳ ಭವಿಷ್ಯದ ಬಗ್ಗೆ "ಅನಕ್ಷರಸ್ಥ ಮಹಿಳೆಯರು ಇರುವುದಿಲ್ಲ " ಎಂಬ ಕೂಗನ್ನು ಹುಟ್ಟು ಹಾಕ್ಕಿದ್ದಾರೆ. ಅಲ್ಲಿಯ ಹೆಣ್ಣು ಮಕ್ಕಳ ಶಾಲೆಯನ್ನು 12 ನೆ ತರೆಗತಿಯವರೆಗೆ ಮಲ್ದರ್ಜೆ ಗೆರೀಸಿ  , ಸಹ ಶಿಕ್ಷಣವನ್ನು 10 ನೆ ತರೆಗತಿವರೆಗೆ ವಿಸ್ತರಿಸಿದ್ದಾರೆ. ಗ್ರಾಮ ಪಂಚಾಯತ್ ಎಲ್ಲ ಕುಟುಂಬದವರಲ್ಲಿ ತಿಳುವಳಿಕೆಯನ್ನು ನೀಡಿ ಶೇ 90 % ರಷ್ಟು ಹೆಣ್ಣುಮಕ್ಕಳು ಇಂದು ಸಾಕ್ಷರ ರಾಗುವ  ಪ್ರಗತಿ ಪಥದಲ್ಲಿದ್ದಾರೆ.

ಗ್ರಾಮಗಳಲ್ಲಿ ಸ್ವಚ್ಛತೆ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವಿದ್ದು ಕಳೆದ ಸಾಲಿನಲ್ಲಿ ಗೋಪಾಲಪುರ ಗ್ರಾಮ ಪಂಚಯತ್ತ್ ಗೆ "ನಿರ್ಮಲ ಗ್ರಾಮ ಪುರಸ್ಕಾರ" ದೊರೆತಿದೆ. ಸಮೀಪದಲ್ಲಿರುವ "ತಲ್ ಚಪ್ಪರ್ ಕೃಷ್ಣ ಮೃಗ ಅಭಯಾರಣ್ಯ" ದ ಲಾಭ ಪಡೆಯಲು ಗ್ರಾಮದ ಕೋಟೆಯಲ್ಲಿರುವ "ಝುನೆನ ಕೊಠಡಿಗಳನ್ನು" ಪ್ರವಾಸಿಗರ ಅನುಕೂಲಕ್ಕಾಗಿ ಲಭ್ಯವಾಗಿಸಿದ್ದಾರೆ. ಇದರಿಂದ ಬರುವ ಆದಾಯ ಸಹ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಲಿದೆ.

ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ರತಿಯ ಪ್ರಕಾರ ರಾಜ್ಯ ಸರ್ಕಾರ ಗ್ರಾಮ ಪಂಚಾಯತ್ ಬಲವರ್ಧನೆಗೆ ಶಾಸನಗಳನ್ನು ರೂಪಿಸಿದ್ಧರೂ ಅವುಗಳು  ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ . ಸರ್ಕಾರದಿಂದ ದೊರೆಯುವ ಶಾಸನಬದ್ಧ ಅನುಧನ ರೂ.8 .೦೦ ಲಕ್ಷದಲ್ಲಿ ಸರ್ಕಾರದ ಮಾರ್ಗದರ್ಶನಗಳಂತೆ ಖರ್ಚು ಮಾಡಬೇಕಿರುವುದರಿಂದ ಹೆಚ್ಚೇನೂ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲವೆನ್ನುತ್ತಾರೆ. ಆದರೆ ಕೇರಳ ರಾಜ್ಯದಲ್ಲಿರುವಂತೆ ನಮ್ಮಲಿಯು ತೆರಿಗೆಯನ್ನು ಸಂಗ್ರಹಿಸಿ, ಬಳುಸುವುದಾಗಿದ್ದಲ್ಲಿ ಗಮನಾರ್ಹ ಸಾಧನೆ ಮಾಡಲು ಸಾಧ್ಯವೆನ್ನುತ್ತಾರೆ. ನಾವು ಎಷ್ಟೇ ಪ್ರಾಮಾಣಿಕ ಪ್ರಯತ್ನ ನಡೆಸಿದರೂ ಕೆರಳದಷ್ಟು ಮಾಡಲು ಸಾಧ್ಯವಾಗುತ್ತಿಲ್ಲವೆಂಬ ಕೊರಗನ್ನು ವ್ಯಕ್ತಪಡಿಸಿದ್ದಾರೆ. ಕೇರಳ, ಕರ್ನಾಟಕ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಗಳು ಸ್ವತಹ ತೆರಿಗೆಯನ್ನು ವಿಧಿಸಲು ಹಾಗು ಆ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಉಪಿಯೋಗಿಸಲು ಸಾಧ್ಯವಿದೆ. ಇಲ್ಲಿಯೂ ಸಹ ಮೋಟರ್ ವಾಹನದ ಕಾಯ್ದೆ ಪ್ರಕಾರ ತೆರಿಗೆ ವ್ಯಪ್ತಿಯಲ್ಲಿಲ್ಲದ ವಾಹನಗಳಿಗೆ ತೆರಿಗೆ ವಿಧಿಸಬಹುದೆಂದಿದ್ದರು ಇಲ್ಲಿರುವ ಕೇವಲ ಒಂತೆಗಾಡಿ ಗಳೆಂದು ಅಲುಬುತ್ತಾರೆ. ಒಂದು ವೇಳೆ ಕೇರಳ , ಕರ್ನಾಟಕದಲ್ಲಿರುವಷ್ಟು ಅವಕಾಶಗಲಿದ್ದರೆ ನಾನು ಸಹ ವಿಮಾನದಲ್ಲಿ ಹರಾದುತ್ತಿದ್ದನೆಂದು ಹೇಳಿರುವುದು ಬಹಳ ಮಹತ್ವದ ಹಾಗು ಆಶ್ಚರ್ಯದ ಸಂಗತಿಯಾಗಿದೆ.

ಗ್ರಾಮ ಪಂಚಾಯತ್ಗಳಿಗೆ ಸರ್ಕಾರದಿಂದ ಬರುವ ಅನುದಾನ ವಂದನ್ನೇ ನಂಬಿಕೊಂಡಿದ್ದರೆ ಅಷ್ಟೇನು ಅಭಿವೃಧಿ ಸಾಧಿಸಲು ಸಾಧ್ಯವಾಗಲಾರದು. ಗ್ರಾಮ ಪಂಚಾಯತ್ ಅಧ್ಯಕ್ಷರು ಅಭಿವೃದ್ಧಿಪರ ಚಿಂತನೆ ಮಾಡುವವರಾಗಿದ್ದು, ಅಭಿವೃದ್ಧಿಗಾಗಿ ವಿಶೇಷ ಯೋಜನೆಗಳನ್ನು ಸರ್ಕಾರದಿಂದ ಮಂಜುರೂ ಮಾಡಿಸುವ ಸಾಮರ್ಥ್ಯ ಹೊಂದಿದವರಾಗಿದ್ದು, ಸಂಘಟನ ಚತುರರು ಹಾಗು ಚಾಣಕ್ಯ ರಾಕಾರಣಿಗಳಾಗಿದ್ದಲ್ಲಿ ಅನೇಕ ಜನ ಪರ ಕೆಲಸಗಳನ್ನು ಮಾಡಿ ತೋರಿಸಲು ಸಾಧ್ಯವಾಗಬಹುದು. ಇಂತಹ ವ್ಯಕ್ತಿತ್ವವನ್ನು ಗೋಪಾಲಪುರ ಗ್ರಾಮ ಪಂಚಾಯತ್ ಅಧ್ಯಕ್ಷೆಯಾದ ರತಿಯವರು ಎಲ್. ಎಲ್. ಬಿ. ಓದಿದವರಾಗಿದ್ದು ಸರ್ಕಾರದ ಅಧಿಕಾರಗಳೊಂದಿಗೆ ದೆಹೆಲಿಯ ರಾಜಕಾರಣಿಗಳೊಡನೆ ಹಾಗು ಸ್ಥಳೀಯ ಮಾಧ್ಯಮಗಳೊಡನೆ ಉತ್ತಮ ಸಂಪರ್ಕವಿಟ್ಟುಕೊಂಡಿರುವುದು ಅವರ ಸಾಧನೆಗೆ ಸಹಕಾರಿಯಾಗಿದೆ.
ಶ್ರೀಮತಿ ರತಿಯವರು ದೂರದ್ರಿಷ್ಟಿಯುಳ್ಳ ಚಿಂತಕರಾಗಿದ್ದು 2005 - 25 ರ ತನಕ ಕೈಗೊಳ್ಳಬಹುದಾದ  ಅಭಿವೃದ್ಧಿ ಕೆಲಸಗಳ ಮಾಸ್ಟರ್ ಪ್ಲಾನ್ ತಯಾರಿಸಿದ್ದು , ಅದರಲ್ಲಿ ಹಂತ ಹಂತದ ಪ್ರಸ್ತಾವನೆಗಳಿದ್ದು, ಜನಗನತಿಯ ಅಂಕಿ ಅಂಶಗಳು, ನಕ್ಷೆಗಳು ಹಾಗು ಒಂದು ಗ್ರಾಮದಲ್ಲಿ ಆದರ್ಶಪ್ರಾಯವಾಗಿ ಎಷ್ಟು ಜನಸಂಖ್ಯೆಯ ಸಂದ್ರತೆಯಿರಬೇಕೆನ್ನುವ ವಿಚಾರಗಳಿವೆ. ಇದನ್ನು ಅತ್ಯುತ್ತಮವಾಗಿ ತಾಂತ್ರಿಕ ಚಿಂತನೆಯೊಂದಿಗೆ ತಯಾರಿಸುವುದು ನಂಬಿಕೆಯನ್ನು ಉಂಟುಮಾಡುವಲ್ಲಿ ಮತ್ತು ಆಶ್ಚರ್ಯಭರಿತವಾದ ಅಂಶಗಳಿಂದ ಕೂಡಿರುವುದು ಗಮನಾರ್ಹ ವಿಚಾರ. ಇದು ಎಲ್ಲರ ಮನವನ್ನು ಗೆಲ್ಲುವಂತಿದೆ.

ಸ್ಥಳೀಯ ಸಂಸ್ಥೆಗಳಿಗೆ ಸರಿಯಾದ ಮುಖಂಡತ್ವ ದೊರೆತಲ್ಲಿ ಏನೆಲ್ಲಾ ಮಾಡಬಹುದೆಂದು ಗೋಪಾಲಪುರ ಮಾದರಿಯಾಗಿದೆ. ಪ್ರಕುರ್ತಿಯ ಮನಸಿದ್ದರೂ, ಮನಸ್ಸಿನ ಮುನಿಸಿಲ್ಲದಿದ್ದರೆ ಏನೆಲ್ಲಾ ಸಾಧನೆಗಳು ಮಾಡಬಹುದೆಂದು ಸಾಧಿಸಿ ತೋರಿಸಿರುವುದು ಗೋಪಾಲಪುರ ಗ್ರಾಮ ಪಂಚಾಯತದ ಹಿರಿಮೆಯಾಗಿದೆ .ಕರ್ನಾಟಕದಲ್ಲಿರುವ  ಗ್ರಾಮ ಪಂಚಯಾತಗಳು ಇದಕ್ಕೂ ಹೆಚ್ಚಿನ ಸಾಧನೆ ಮಾಡುವ ಸ್ಪರ್ಧೆಗಿಳಿದು ಗಾಂಧೀಜಿಯವರ ಕಂಡ 'ಗ್ರಾಮ ರಾಜ್ಯದ' ಕನಸನ್ನು ರಾಮ ರಾಜ್ಯ ವಾಗಿಸುವಲ್ಲಿ ಗೋಪಾಲಪುರವನ್ನು ಸ್ಪೂರ್ತಿಯ ಸೇಲೆಯಾಗಿಸಕೊಂಡು, ನಮ್ಮ ಗ್ರಾಮಗಳನ್ನು ಅಭಿವೃದ್ಧಿಗೊಳಿಸುವ ಚ್ಚಲವನ್ನು ಸಾಧಿಸಿದಲ್ಲಿ ನಮ್ಮ ರಾಜ್ಯ ರಾಷ್ಟ್ರಕ್ಕೆ ಮಾದರಿಯಗಬಲ್ಲದು.   

(ಕರ್ನಾಟಕ ವಿಕಾಸದಲ್ಲಿ ಪ್ರಕಟವಾದ ಲೇಖನ)

Tuesday, December 7, 2010

ಉತ್ತರ ಕನ್ನಡ ಜಿಲ್ಲೆಯಲ್ಲಿ ಗ್ರಾಮೀಣಾಭಿವೃದ್ಧಿ

Kali River Valley in U.K.
ಅರಣ್ಯದ ಜಿಲ್ಲೆ ಎಂದೇ ಪ್ರಖ್ಯಾತವಾಗಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಪರಿಸರವಾದಿಗಳು ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವರೆನ್ನುವ ಪ್ರತೀತಿ ಇದೆ. ರಾಜ್ಯದ ಅತಿ ವಿಸ್ತಾರವಾದ, ಗುಡ್ಡಗಾಡಿನಿಂದ ಕೂಡಿರುವ ಈ ಜಿಲ್ಲೆಯಲ್ಲಿ ಅರಣ್ಯ ರಕ್ಷಣೆ ಸಹ ಅಭಿವೃದ್ಧಿಯಷ್ಟೇ ಮಹತ್ವವನ್ನು ಪಡೆದಿದೆ. ರಾಜ್ಯದ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಈ ಸ್ಥಳವು ವಿಶ್ವದ ೧೮ ಜೀವ  ವೈವಿಧ್ಯತಾ ತಾಣಗಳಲ್ಲಿ ಒಂದಾಗಿದ್ದು ಅತೀ ಮನಮೋಹಕ ಜಲಧಾರೆ (ವಾಟರ್ ಫಾಲ್ಸ್) ಗಳನ್ನೂ ಹೊಂದಿದ್ದು, ಸುಂದರವಾದ ಮನಮೋಹಕ ಪ್ರಾಕೃತಿಕ ಸೊಬಗನ್ನು ಹಾಗು ಅನೇಕ ಅತೀ ಮಹತ್ವದ ವನ್ಯಪ್ರಾಣಿ ಗಳಿಂದಲೂ ಮತ್ತು ಸಸ್ಯರಾಶಿಗಳಿಂದಲೂ ಕೂಡಿರುವ ಪ್ರಾಕೃತಿಕ ಖಣಜವೆನಿಸಿದೆ. ಇಲ್ಲಿ ಉಗಮವಾಗುವ ನದಿಗಳಿಂದ ರಾಜ್ಯಕ್ಕೆ ಬೇಕಾಗಿರುವ ವಿದ್ಯುತ್ತನ್ನು ಉತ್ಪತ್ತಿ ಮಾಡಲಾಗುತ್ತದೆ ಹಾಗು ಅನೇಕ ನದಿಗಳು ಪುರ್ವಾಭಿಮುಖವಾಗಿ ಹರಿದು ನೀರಾವರಿಗೆ ಅನುಕೂಲವಾಗಿವೆ. ಇಂಥಹ ಪ್ರದೇಶದಲ್ಲಿ ಅಭಿವೃದ್ಧಿ ಹಾಗು ಪರಿಸರ ಸಂರಕ್ಷಣೆ (ಅರಣ್ಯ ಸಂರಕ್ಷಣೆ) ಜೊತೆಗೂಡಿ ಸಾಗಬೇಕಿದೆ. ಒಂದು ಇನ್ನೊಂದನ್ನು ಕಡಿಮೆ ಗೊಳಿಸುವ ಪ್ರವೃತ್ತಿಯನ್ನು ಬಿಟ್ಟು, ಅಭಿವೃದ್ಧಿ ಹಸಿರಿನ ಮಧ್ಯೆ ಅಭಿವೃದ್ಧಿ ಹೊಂದಿದಾಗ ಪರಿಸರ ಸಂರಕ್ಷಣೆಯ ಜೊತೆ ಜೊತೆಗೆ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಬಹುದು. "ಹಸಿರಿನ ನಾಶ ಮಾನವನ ವಿನಾಶ" ಎನ್ನುವ ಉಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಾಗ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗಬಹುದು ಎನ್ನುವುದನ್ನು ನಮ್ಮ ಚರಿತ್ರೆಯಿಂದ ತಿಳಿದುಕೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಈಗಾಗಲೇ ಮಣ್ಣಿನಡಿ ಮುಚ್ಚಿಹೋಗಿರುವ ಹೆಸರಾಂತ ನಾಗರಿಕತೆಗಳ ಸಾಲಿನಲ್ಲಿ ಒಂದಾಗುವುದನ್ನು  ತಪ್ಪಿಸುವ ಪ್ರಯತ್ನ ನಮ್ಮದಾಗಬೇಕಿದೆ.

ಸಮುದಾಯ ಸಹಭಾಗಿತ್ವದ ಅಗತ್ಯ 
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ "ಗ್ರಾಮ ಸ್ವರಾಜ್ಯ-ರಾಮ ರಾಜ್ಯ" ವಾಗ ಬೇಕೆನ್ನುವ ಕನಸನ್ನು ಸಾಕಾರಗೊಳಿಸಲು ಜನರ ಸಹಭಾಗಿತ್ವ  ಹಾಗು ಸಹಕಾರ ಅಗತ್ಯವಾಗಿದೆ. ಸರ್ಕಾರದ ಅನೇಕ ಯೋಜನೆಗಳ ಫಲವಾಗಿ ಇಂದು ಗ್ರಾಮಗಳಲ್ಲಿ ರಸ್ತೆ, ಅರೋಗ್ಯ, ಶಿಕ್ಷಣ, ಕೃಷಿ, ತೋಟಗಾರಿಕೆ ಕ್ಷೇತ್ರಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಇಲ್ಲಿ ಸಮುದಾಯದ ಆಸ್ತಿ ಹಾಗು ವೈಯಕ್ತಿಕ ಅಭಿವೃದ್ಧಿಗೆ ಒತ್ತನ್ನು ನೀಡುವುದು ವೇದ್ಯವಾಗುತ್ತದೆ. ಸಾರ್ವಜನಿಕ ವ್ಯವಸ್ಥೆ ಆಗಿರುವ ನೀರಿನ ಪೂರೈಕೆ, ರಸ್ತೆ, ಸಂಚಾರ, ಅರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಹೆಚ್ಚಿನ ಯಶಸ್ಸನ್ನು ಕಾಣಬೇಕಾದರೆ ಗ್ರಾಮೀಣ ಭಾಗದ ಜನರ ಸಹಭಾಗಿತ್ವದಿಂದ ಸಾಧ್ಯವಾಗುವುದು. ಈ ಸಾರ್ವಜನಿಕ ವ್ಯವೆಸ್ಥೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಬೇಕಾದಲ್ಲಿ ಸಮುದಾಯದ ಆಸ್ತಿ,  ಸಾರ್ವಜನಿಕ ವ್ಯವಸ್ಥೆ ನಮ್ಮದು-ನಮಗಾಗಿ ಎನ್ನುವ ಮನೋಭಾವನೆ ಸಾರ್ವಜನಿಕರಲ್ಲಿ ಇರಬೇಕಾದದ್ದು ಮಹತ್ವದ ಅಂಶ. ಈ ಅಂಶದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸ ಜನ ಪ್ರತಿನಿಧಿಗಳಿಂದ, ಧಾರ್ಮಿಕ ಮುಖಂಡರಿಂದ ಹಾಗು ಸರ್ಕಾರದ ಅಧಿಕಾರಿಗಳಿಂದ ಆಗ ಬೇಕಾಗಿದೆ. ಜನರಲ್ಲಿ ಈ ಭಾವನೆ ಬಂದಿದ್ದೆ ಆದಲ್ಲಿ  ಅಭಿವೃದ್ಧಿಯ ಗತಿಯನ್ನು ಹೆಚ್ಚಿಸಲು ಸಾದ್ಯವಾಗುತ್ತದೆ. ಅಷ್ಟೇ ಅಲ್ಲದೆ ಸಮುದಾಯದ ಆಸ್ತಿ ನಿರ್ವಹಣೆ ಯಾವುದೇ ಸಮಸ್ಯೆ ಇಲ್ಲದೇ ನಿರಂತರತೆ ಕಾಯ್ದುಕೊಂಡು ಸುಸ್ಥಿರ ಅಭಿವೃದ್ಧಿಯನ್ನು  ಹೊಂದಲು ಸಾಧ್ಯವಾಗುತ್ತದೆ. ಒಂದು ಉದಾಹರಣೆ: ಜಿಲ್ಲೆಯಲ್ಲಿ ಅನುಷ್ಠಾನವಾಗುತ್ತಿರುವ ಜಲ ನಿರ್ಮಲ ಯೋಜನೆ. ಇದೊಂದು ಗ್ರಾಮಾಂತರ ಪ್ರದೇಶದಲ್ಲಿ ಜನರಿಗೆ ಸುರಕ್ಷಿತ ಕುಡಿಯುವ ನೀರನ್ನು ಪೂರೈಕೆ ಮಾಡುವ, ಗ್ರಾಮದ ಪರಿಸರ ನೈರ್ಮಲ್ಯವನ್ನು ಕಾಪಾಡುವ ಯೋಜನೆಯಾಗಿದೆ. ಈ ಯೋಜನೆ ಅಡಿ ಗ್ರಾಮೀಣ ಮಟ್ಟದಲ್ಲಿ "ಗ್ರಾಮ ನೀರು ಪೂರೈಕೆ ಹಾಗು ನೈರ್ಮಲ್ಯ ಸಮಿತಿಯನ್ನು" ರಚನೆ ಮಾಡಿ, ಜನರ ಅವಶ್ಯಕತೆಗೆ ತಕ್ಕಂತೆ ಯೋಜನೆಯನ್ನು ತಾಂತ್ರಿಕ ನೆರವಿನಿಂದ ಸಿದ್ಧಪಡಿಸಿ ಸಮಿತಿಯಿಂದಲೇ ಅನುಷ್ಠಾನ ಮಾಡಲಾಗುವುದು. ಅಲ್ಲಿ ಸಹಭಾಗಿತ್ವದೊಂದಿಗೆ ಶೇಖಡ ೧೦ ರ ಸಮುದಾಯದ ವಂತಿಗೆ ಯೊಂದಿಗೆ ಮತ್ತು ಗ್ರಾಮ ಪಂಚಾಯತ್ ನ ಶೇಕಡಾ ೫ ರ  ವಂತಿಗೆಯೊಂದಿಗೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹಲವಾರು ಸಮಿತಿಗಳು ಸಕ್ರಿಯವಾಗಿ ಪಾಲ್ಗೊಂಡು ಗ್ರಾಮದ ಅವಶ್ಯಕತೆಗೆ ತಕ್ಕಂತೆ ಕುಡಿಯುವ ನೀರಿನ ಮತ್ತು  ನೈರ್ಮಲ್ಯ ಯೋಜನೆಯ ಅನುಷ್ಠಾನ ಗುಣಮಟ್ಟಕ್ಕೆ ಅನುಗುಣವಾಗಿ ಮತ್ತು ಪಾರದರ್ಶಕವಾಗಿ ಕಾರ್ಯಾನುಷ್ಠಾನ ಮಾಡಲಾಗಿದೆ. ಅದೇ ರೀತಿಯಲ್ಲಿ ಈ ಯೋಜನೆಯ ನಿರ್ವಹಣೆಗೂ ಅಷ್ಟೇ ಒತ್ತನ್ನು ನೀಡಲಾಗಿದೆ. ಸಮಿತಿಗಳು ಸಕ್ರಿಯವಾಗಿ ನಿರ್ವಹಣೆಯನ್ನು ನಿರ್ವಹಿಸಿದಲ್ಲಿ ಯಾವುದೆ ಸಮಸ್ಯೆ ಇಲ್ಲದೆ ನೀರು ಪೂರೈಕೆಯಲ್ಲಿ ನಿರಂತರತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ . ಯಾವುದೇ ಯೋಜನೆ ಕೇವಲ ಅನುಷ್ಠಾನವಾದಲ್ಲಿ ಅಭಿವೃದ್ಧಿ ಹೊಂದಿದೆ ಎಂದು ಹೇಳಲು ಸಾಧ್ಯವಿಲ್ಲ.  ಅನುಷ್ಠಾನ ಒಂದು ಅಂಶವಾದರೆ, ಅದರ ನಿರ್ವಹಣೆ ಅಷ್ಟೇ ಮಹತ್ವದ ಮತ್ತೊಂದು ಅಂಶವೆನ್ನುವುದನ್ನು ಮರೆಯಲಾಗದು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ.

ಯೋಜನೆಗಳ ಯಶಸ್ವಿ ಅನುಷ್ಠಾನ
ಜಿಲ್ಲೆಯಲ್ಲಿ ಅನುಷ್ಟಾನವಾಗುತ್ತಿರುವ  "ಸರ್ವ  ಶಿಕ್ಷ ಅಭಿಯಾನ ", "ಸಂಪೂರ್ಣ ಸ್ವಚ್ಛತಾ ಆಂದೋಲನಾ", ಸಾಕ್ಷರತಾ ಆಂದೋಲನಗಳಲ್ಲಿಯೂ ಹೆಚ್ಚಿನ ಒತ್ತನ್ನು ಸಹಭಾಗಿತ್ವಕ್ಕೆ ನೀಡಲಾಗಿದೆ. ಇವೆಲ್ಲವೂ ಸಾರ್ವಜನಿಕ ವ್ಯವಸ್ಥೆಯಾಗಿದ್ದರೂ ಸಹಾ ವೈಯಕ್ತಿಕ ಲಾಭಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಸರ್ವ ಶಿಕ್ಷಾ ಅಭಿಯಾನದಲ್ಲಿ ಶಾಲೆಗಳ ಅಭಿವೃದ್ಧಿಯೊಂದಿಗೆ ಶಿಕ್ಷಣದ ಗುಣಮಟ್ಟಕ್ಕೆ ಯಾವ ಮಕ್ಕಳೂ ಶಾಲೆಯಿಂದ ಹೊರಗುಳಿಯಬಾರದೆನ್ನುವ ಅಂಶಗಳಿಗೆ ಮಹತ್ವವನ್ನು ನೀಡಲಾಗಿದೆ. ಅದೇ ರೀತಿ ಸಾಕ್ಷರತಾ ಅಂದೋಲನದಲ್ಲಿ ಅನಕ್ಷರಸ್ಥರನ್ನು ಅಕ್ಷರಸ್ಥರನ್ನಾಗಿ ಮಾಡುವ ಕಾರ್ಯಕ್ಕೆ ಸಂಪೂರ್ಣ ಸ್ವಚ್ಛತಾ ಅಂದೋಲನದಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ, ಗ್ರಾಮಗಳ ಸ್ವಚ್ಛ ಪರಿಸರಕ್ಕೆ ಆಧ್ಯತೆಯನ್ನು ನೀಡಲಾಗಿದೆ. ಇಂತಹಾ ವೈಯಕ್ತಿಕ ಲಾಭವಿರುವ ಯೋಜನೆಗಳಲ್ಲಿ ಜನರ ಸಹಭಾಗಿತ್ವದೊಂದಿಗೆ ಮಾತ್ರ ಯಶಸ್ಸನ್ನು ಕಾಣಬಹುದು. ಇದರಿಂದ ೨೦೦೭ ನೇ ಸಾಲಿನಲ್ಲಿ ಜಿಲ್ಲೆಯ ೧೧ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರದ ಗ್ರಾಮೀಣ ಮಂತ್ರಾಲಯದಿಂದ ನೀಡುವ "ನಿರ್ಮಲ ಗ್ರಾಮ" ಪುರಸ್ಕಾರವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ. ಇದೇ ರೀತಿಯ ಜಿಲ್ಲೆಯ ಜನರ ಸಹಕಾರದಿಂದ ಮುಂಬರುವ ವರ್ಷಗಳಲ್ಲಿ "ನಿರ್ಮಲ ತಾಲೂಕ್" ಹಾಗೂ "ನಿರ್ಮಲ ಜಿಲ್ಲಾ" ಪುರಸ್ಕಾರಕ್ಕೆ ಸಜ್ಜುಗೊಳಿಸುವುದು ಸರ್ವರ ಆಶಯವಾಗಬೇಕಿದೆ. ಇಂತಹಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳುವ ಮನೋಭಾವನೆಯನ್ನು ಜನರಲ್ಲಿ ಮೂಡಿಸುವ ಕೆಲಸಕ್ಕೆ ಸರ್ವರೂ ಪ್ರಯತ್ನಶೀಲರಾಗಬೇಕಾದದ್ದು ಇಂದಿನ ಅವಶ್ಯಕತೆಗಳಲ್ಲೊಂದಾಗಬೇಕಿದೆ.

ಗ್ರಾಮ ಪಂಚಾಯತ್ ಗಳ ಸಬಲೀಕರಣ
ಗ್ರಾಮೀಣಾಭಿವೃದ್ಧಿಗಾಗಿ ವಿಕೆಂದ್ರೀಕೃತ ವ್ಯವಸ್ಥೆ ಮೂರು ಹಂತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಗ್ರಾಮ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಗಳ ಜನಪ್ರತಿನಿಧಿಗಳೊಂದಿಗೆ ಸಂವಿಧಾನಾತ್ಮಕವಾಗಿ ರಚಿಸಲ್ಪಟ್ಟಿವೆ. ಈ ಮೂರು ತೆರನಾದ ಹಂತದಲ್ಲಿ ನಿರ್ವಹಿಸಬೇಕಾದ ಕೆಲವು ಕಾರ್ಯಗಳನ್ನು ಚಟುವಟಿಕೆ ನಕ್ಷೆಯಂತೆ, ಸಹಕಾರ ಮನೋಭಾವನೆಯಿಂದ ಸಂಯೋಜಿತ ರೀತಿಯಲ್ಲಿ ಅನುಷ್ಠಾನವಾಗಬೇಕಿದೆ, ಹಾಗೂ ಕ್ರಿಯಾ ಯೋಜನೆ ತಯಾರಿಯನ್ನು ಅವಶ್ಯಕತೆಗನುಗುಣವಾಗಿ ತಯಾರಿಸಿ ಅನುಷ್ಠಾನಗೊಳಿಸುವ ಕೆಲಸವಾಗಬೇಕಿದೆ. 
ವಿಕೆಂದ್ರೀಕೃತ ವ್ಯವಸ್ಥೆಯಲ್ಲಿ ಹೆಚ್ಚಿನ ಮಹತ್ವವನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿದೆ. ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಜನರ ಆಶೋತ್ತರಗಳಿಗೆ ಅನುಗುಣವಾಗಿ ಒದಗಿಸುವ ಮಹತ್ವದ ಜವಾಬ್ದಾರಿ ಗ್ರಾಮ ಪಂಚಾಯತದ್ದಾಗಿರುತ್ತದೆ. ಈ ಮೂಲಭೂತ ಸೌಕರ್ಯಗಳನ್ನು ಪೂರೈಸಲು ಹಣದ ಅವಶ್ಯಕತೆ ಬಹಳವಾಗಿದೆ. ಸರ್ಕಾರದಿಂದ ಬರುವ ಅನುದಾನದ ಜೊತೆಗೆ ಜನರ ಸಹಭಾಗಿತ್ವದಿಂದ ಬಂಡವಾಳ ಕ್ರೋಡೀಕರಿಸುವ ಕೆಲಸವಾಗಬೇಕಿದೆ. ಸರ್ಕಾರವನ್ನು ಬಿಟ್ಟರೆ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ತೆರಿಗೆಯನ್ನು ವಿಧಿಸುವ ಮತ್ತು ಅದರಿಂದ ಬಂದ ಆಧಾಯವನ್ನು ಅಭಿವೃದ್ಧಿಗಾಗಿ ವೆಚ್ಚ ಭರಿಸುವ ಅಧಿಕಾರವಿರುತ್ತದೆ. ಆದುದರಿಂದ ಜನಪ್ರತಿನಿಧಿಗಳು ಜನರ ಸಹಕಾರದೊಂದಿಗೆ ಆದಾಯವನ್ನು ಹೆಚ್ಚಿಸುವ ಕೆಲಸವನ್ನು ಜವಾಬ್ದಾರಿಯುತವಾಗಿ ಮಾಡಬೇಕಿದೆ. ಇದರಿಂದ ಗ್ರಾಮಗಳಲ್ಲಿ ಬೀದಿ ದೀಪದ ವೆಚ್ಚ, ಕುಡಿಯುವ ನೀರಿನ ನಿರ್ವಹಣೆ ಹಾಗೂ ಮೂಲಭೂತ ಸೌಕರ್ಯಗಳ ಸೃಷ್ಠಿ ಸಾಧ್ಯವಾಗುತ್ತದೆ. ಖರ್ಚು ಮತ್ತು ಆದಾಯವನ್ನು ಸರಿತೂಗಿಸುವ ಕೆಲಸ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಗಬೇಕಾದದ್ದು ಪ್ರಮುಖ ಅಂಶವಾಗಿದೆ. ಇಂದು ಬಹಳಷ್ಟು ಗ್ರಾಮ ಪಂಚಾಯತಿಗಳು ತಮ್ಮ ಗ್ರಾಮದಲ್ಲಿಯ ಬೀದಿ ದೀಪಗಳ ಮತ್ತು ಕುಡಿಯುವ ನೀರಿನ ಸ್ಥಾವರಗಳ ವಿದ್ಯುತ್ ಬಿಲ್ ಭರಿಸಲು ಸಹಾ ಹಣಕಾಸಿನ ಕೊರತೆಯನ್ನು ಎದುರಿಸುತ್ತಿವೆ. ಇಲ್ಲಿ ಜನ ಪ್ರತಿನಿಧಿಗಳು ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮಸ್ಥರನ್ನು ಪಾಲುದಾರರನ್ನಾಗಿ ಮಾಡುವ ಮಹತ್ವದ ಅಂಶಕ್ಕೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಬೇಕಿದೆ. ಗ್ರಾಮ ಸಭೆಗಳು, ಸ್ಥಳೀಯ ವಿಧಾನ ಸಭೆಗಳಾಗಿ ಪರಿವರ್ತನೆಯಾಗಬೇಕಿದೆ. ಗ್ರಾಮ ಸಭೆಗಳು ಪ್ರಜಾಪ್ರಭುತ್ವದ ತಳಹದಿಯಾಗಿದ್ದು, ಗ್ರಾಮದ ಎಲ್ಲಾ ಸ್ಥರದ, ವರ್ಗದ ಜನರು ತಪ್ಪದೆ ಭಾಗವಹಿಸುವ ಮತ್ತು ಅಲ್ಲಿ ಆಗಬೇಕಾದ ಕೆಲಸ ಕಾರ್ಯಗಳ ಬಗ್ಗೆ ಮುಕ್ತವಾಗಿ ಚರ್ಚೆಗೆ ಅವಕಾಶವನ್ನು ನೀಡಬೇಕಿದೆ. ಇದರಿಂದ ಗ್ರಾಮೀಣಾಭಿವೃದ್ಧಿಯಲ್ಲಿ ಸ್ಥಳೀಯರ ಸಹಭಾಗಿತ್ವ ಮತ್ತು ಸಹಕಾರವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಗ್ರಾಮ ಸಭೆಗಳಲ್ಲಿ ವಿವಿಧ ಯೋಜನೆಗಳ ಮಾಹಿತಿಯನ್ನು ನೀಡುವುದರಿಂದ ಯೋಜನೆಯ ಪಾಲುದಾರರನ್ನಾಗಿ ಮಾಡುವುದರ ಜೊತೆಗೆ ಯೋಜನೆಯನ್ನು ಫಲಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯವೆನಿಸುತ್ತದೆ. ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮ ಸಭೆಗಳ ಪಾತ್ರ ದೊಡ್ದದೆನಿಸುತ್ತಿದೆ. ಇಂದು ಗ್ರಾಮ ಪಂಚಾಯತಿಗಳು ಸಮರ್ಥ ಸಿಬ್ಬಂದಿಯ ಕೊರತೆ ಹಾಗೂ ಬಂಡವಾಳ ಕ್ರೋಡೀಕರಣದ ಕೊರತೆಯಿಂದ ಬಳಲುತ್ತಿವೆ. ಇವುಗಳಿಂದ ಮುಕ್ತವಾಗಿಸಿ, ಗ್ರಾಮ ಪಂಚಾಯತಗಳ ಸಬಲೀಕರಣದೆಡೆಗೆ ಪ್ರಯತ್ನಿಸಬೇಕಿದೆ.

ಗ್ರಾಮ ಪಂಚಾಯ್ತಿಗಳು,ತಾಲ್ಲೂಕ ಹಾಗೂ ಜಿಲ್ಲಾ ಪಂಚಾಯತಿಗಳಿಗೆ ಪೂರಕವಾಗಿ ಅಭಿವೃದ್ಧಿ ಕೆಲಸಗಳನ್ನು ಅನುಷ್ಠಾನಗೊಳಿಸಬೇಕಿದೆ. ಇಲ್ಲಿ ಆರೋಗ್ಯ, ಶಿಕ್ಷಣ, ಮಕ್ಕಳ ಮತ್ತು ಮಹಿಳಾ ಕಲ್ಯಾಣ ಕಾರ್ಯಕ್ರಮಗಳತ್ತ ಹೆಚ್ಚಿನ ಗಮನವಹಿಸಿ, ಸಾರ್ವಜನಿಕ ಸಂಪರ್ಕ ರಸ್ತೆಗಳು, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಪರಿಶಿಷ್ಟ ವರ್ಗ ಮತ್ತು ಪರಿಶಿಷ್ಟರ ಅಭಿವೃದ್ಧಿಯತ್ತ ಹೆಚ್ಚಿನ ಗಮನಹರಿಸಿ ಕಾರ್ಯನಿರ್ವಹಿಸುವುದು ಅವಶ್ಯವೆನಿಸುತ್ತದೆ.

ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಸಂರಕ್ಷಣೆ
ಜಿಲ್ಲೆಯು ಶೇಕಡಾ ೮೦ ರಷ್ಟು ಅರಣ್ಯ ಪ್ರದೇಶದಿಂದ ಕೂಡಿರುವುದರಿಂದ ಪರಿಸರಕ್ಕೆ ಪೂರಕವಾದ ಅಭಿವೃದ್ಧಿಯತ್ತ ಯೋಚಿಸಿದಾಗ ಪರಿಸರ ಪ್ರವಾಸೋದ್ಯಮಕ್ಕೆ ವಿಪುಲವಾದ ಅವಕಾಶಗಳಿರುವುದು ಕಂಡುಬರುತ್ತದೆ. ಈ ನಿಟ್ಟಿನಲ್ಲಿ ಗ್ರಾಮೀಣ ಜನರು ವಾಸಿಸುವ ಗ್ರಾಮಗಳಲ್ಲಿಯೇ "ಹೋಂ ಸ್ಟೇ" ಪದ್ಧತಿಯನ್ನು ರೂಡಿಯಲ್ಲಿ ತಂದು ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಬೇಕಾದ ಅನುಕೂಲಗಳನ್ನು ನೀಡಬೇಕಾಗಿದೆ. ಇಲ್ಲಿಯ ಪ್ರಾಕೃತಿಕ ಸೌಂದರ್ಯ "ಹೋಂ ಸ್ಟೇ"ಗೆ ಪೂರಕವಾದ್ದು, ಸ್ಥಳೀಯ ಜನರ ಆಸಕ್ತಿವಹಿಸಿ ಅವರು ವಾಸಿಸುವ ಮನೆಯಲ್ಲಿಯೇ ಒಂದು ಭಾಗವನ್ನು ಪ್ರವಾಸಿಗರಿಗೆ ಮೀಸಲಿಟ್ಟು  ಪ್ರವಾಸಿಗರ ಬೇಕೂ ಬೇಡಗಳಿಗೆ ಸ್ಪಂದಿಸಬೇಕಾಗಿದೆ. ಇಂತಹ "ಹೋಂ ಸ್ಟೇ"ಗಳು ಮಾಹಿತಿ ಜಾಲವನ್ನು ಅಭಿವೃದ್ಧಿಪಡಿಸುವಲ್ಲಿ ಸರ್ಕಾರದ ಇಲಾಖೆಗಳು ಸ್ಥಳೀಯ ಜನರೊಂದಿಗೆ ಕೈಜೋಡಿಸಬೇಕಿದೆ. ಇದರಿಂದ ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳು ಹೆಚ್ಚಿ ಪರಿಸರ ಪ್ರವಾಸೋದ್ಯಮ ಗ್ರಾಮೀಣಾಭಿವೃದ್ಧಿಯ ಕೇಂದ್ರ ಬಿಂದುವಾಗಲಿದೆ.

ಜಿಲ್ಲೆಯಾದ್ಯಂತ ಹರಡಿಕೊಂಡಿರುವ ಮಜರೆಗಳು (೬೪೫೦) ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿರುವ ತಾಣಗಳಂತೆ ಇವೆ. ಗ್ರಾಮಾಂತರ ಪ್ರದೇಶದ ಜನರು ತಾವಿರುವಲ್ಲಿಯೇ ಪ್ರವಾಸಿಗಳು ತಂಗಲು ಸರಳ, ಸ್ವಚ್ಛ ಮನೆ,  ಶೌಚಾಲಯದ ವ್ಯವಸ್ಥೆ, ಸ್ಥಳೀಯ ಆಹಾರದ ವ್ಯವಸ್ಥೆ ಹಾಗೂ ಪ್ರವಾಸಿಗರಿಗೆ ಮಾಹಿತಿ ನೀಡುವ ಜಾಲವನ್ನು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಈ ರೀತಿಯ "ಹೋಂ ಸ್ಟೇ" ಪದ್ಧತಿಯನ್ನು ಜಾರಿಯಲ್ಲಿ ತಂದು ಅವುಗಳನ್ನು ಅಭಿವೃದ್ಧಿಪಡಿಸಲು ಸ್ಥಳೀಯ ಜನರು ಹಾಗೂ ಸರ್ಕಾರದ ಸಹಭಾಗಿತ್ವದಿಂದ ಮಾತ್ರ ಸಾಧ್ಯವಾಗಬಹುದು. ಸರ್ಕಾರದ ವತಿಯಿಂದ ಒಳ್ಳೆಯ ರಸ್ತೆ-ಸಂಪರ್ಕ, ನೀರಿನ ವ್ಯವಸ್ಥೆ ಹಾಗೂ ಪ್ರವಾಸೋದ್ಯಮ ಹಾಗೂ ಅರಣ್ಯ ಇಲಾಖೆಯವರ ಸಹಾಯ ಹಾಗೂ ಸಹಕಾರ, ಇದರ ಜೊತೆಗೆ ಸ್ಥಳೀಯ ಸಂಸ್ಥೆಗಳ ಸಹಕಾರದಿಂದ ಪ್ರವಾಸೋದ್ಯಮ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳು ಜಿಲ್ಲೆಯಲ್ಲಿರುವ "ಹೋಂ ಸ್ಟೇ" ಸ್ಥಳಗಳ ಮಾಹಿತಿ, ಅಲ್ಲಿರುವ ವ್ಯವಸ್ಥೆ, ತಲುಪಲು ಇರುವ ಮಾರ್ಗ ಮತ್ತು ಎಲ್ಲಾ ರೀತಿಯ ಮಾಹಿತಿ ಜಾಲವನ್ನು ಸ್ಥಾಪಿಸಿ, ಈಗಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಅಭಿವೃದ್ಧಿಪಡಿಸುವ ಅವಶ್ಯಕತೆಯಿದೆ. ಸಾಮಾನ್ಯವಾಗಿ ಜಿಲ್ಲೆಯಲ್ಲಿರುವ ಗ್ರಾಮಗಳು ಮತ್ತು ಮಜರೆಗಳು ಸ್ವಚ್ಛತೆಯಿಂದ ಕೂಡಿವೆ. ಸ್ಥಳೀಯ ಗ್ರಾಮ ಪಂಚಾಯತಿಗಳು ವೈಯಕ್ತಿಕ ಶೌಚಾಲಯದತ್ತ ಹೆಚ್ಚಿನ ಗಮನ ನೀಡಿ, ಊರಿನ ಕಸವಿಲೇವಾರಿಯನ್ನು ಸುಗಮಗೊಳಿಸಿದಲ್ಲಿ ನಿರ್ಮಲ ಗ್ರಾಮಗಳನ್ನಾಗಿ ಮಾಡಲು ಸಾಧ್ಯವಿದೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸಲು ಬಹಳ ಸಹಕಾರಿಯಾಗಬಲ್ಲದು. ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ೧೧ ಗ್ರಾಮ ಪಂಚಾಯತಿಗಳು ಕೇಂದ್ರ ಸರ್ಕಾರದಿಂದ ಕೊಡಲ್ಪಡುವ "ನಿರ್ಮಲ ಗ್ರಾಮ" ಪುರಸ್ಕಾರಕ್ಕೆ ಆಯ್ಕೆಯಾಗಿವೆ. ಇದರ ಪರಿಣಾಮ ಅಕ್ಕಪಕ್ಕದ ಗ್ರಾಮಗಳಲ್ಲೂ ಪರಿಣಾಮ ಬೀರಲಿದ್ದು, ಪ್ರವಾಸೋದ್ಯಮದ ಅಭಿವೃದ್ಧಿಗೆ ಕಾಣಿಕೆಯಾಗಲಿದೆ. ಪ್ರವಾಸೋದ್ಯಮ ಹಾಗೂ ಗ್ರಾಮೀಣಾಭಿವೃದ್ಧಿ ಒಂದಕ್ಕೊಂದು ಪೂರಕವಾಗಿದ್ದು, ಗ್ರಾಮೀಣ ಭಾಗದ ಜನರ ಆರ್ಥಿಕ ಪರಿಸ್ಥಿತಿ ಹೆಚ್ಚಿಸುವಲ್ಲಿ ಹಾಗೂ ಆಯಾ ಪ್ರದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಕೊಡುಗೆಯಾಗಲಿದೆ. ತನ್ಮೂಲಕ ಸ್ಥಳೀಯ ಜನರ ಅಂದರೆ ಸಿದ್ಧಿ, ಗೌಳಿ, ಹಾಲಕ್ಕಿ, ಒಕ್ಕಲಿಗ ಹಾಗೂ ಗೊಂಡ ಸಂಸ್ಕೃತಿಯನ್ನು ಹೊರಗಿನವರಿಗೆ ಪರಿಚಯಿಸುವ ಹಾಗೂ ರಕ್ಷಿಸುವ ಅವಶ್ಯಕತೆ ಸಹಾ ಇದೆ.
ಜಿಲ್ಲೆಯ ಗ್ರಾಮಗಳಲ್ಲಿ ತಂಗಿದಲ್ಲಿ ಅದರ ಸುತ್ತಲಿನ ಅರಣ್ಯದ ವೀಕ್ಷಣೆ ಯು ಪ್ರವಾಸಿಗರಿಗೆ ವಿಶಿಷ್ಟ ಅನುಭವ ವನ್ನು ನೀಡುತ್ತದೆ. ಇಂತಹ ಸುಂದರವಾದ ಅರಣ್ಯ ಪ್ರದೇಶ ಬೇರೆಲ್ಲಿಯೂ ಸಿಗಲಾರದು. ಅಣಶಿ ಗ್ರಾಮದ ಸುತ್ತಲಿನ ಅರಣ್ಯದಲ್ಲಿ  ಬೇಸಿಗೆಯಲ್ಲೂ ತುಂಬಾ ತಂಪಾದ ವಾತಾವರಣ ವನ್ನು ಹೊಂದಿರುವುದು ಜಿಲ್ಲೆಯ ವಿಶೇಷಗೊಳಲ್ಲಿ ಒಂದಾಗಿದೆ . ಪ್ರಾಕೃತಿಕವಾಗಿ ಹವಾನಿಯಂತ್ರಣದಂತಿರುವ ಅರಣ್ಯ ಪ್ರದೇಶದಲ್ಲಿ ಕಲ್ನಡಿಗೆಯಿಂದ ಓಡಾಡಬಹುದು, ಅಲ್ಲಿರುವ ಮರಗಳನ್ನು ಪರಿಚಿಸಿಕೊಳ್ಳುವುದು, ಮರಗಳ ಮೇಲಿನ ವಿವಿದ ಪಕ್ಷಿಗಳ ವೀಕ್ಷಣೆ, ಕೀಟಗಳು, ಸರಿಸೃಪಗಳು , ಕಪ್ಪೆಗಳು ಇದರ ಜೊತೆಗೆ ಕಾಡಿನಲ್ಲಿ ಕಾಣುವ ಅಪರೊಪದ ವನ್ಯ ಪ್ರಾಣಿಗಳಾದ ಹುಲಿ, ಕಪ್ಪು ಚಿರತೆ, ಕಾಳಿಂಗ ಸರ್ಪ, ಸಿಂಘಲಿಕ, ಕಾಡೆಮ್ಮೆ, ಜಿಂಕೆ, ಕಡವೆ ಮುಂತಾದ ವನ್ಯ ಪ್ರಾಣಿಗಳ ಸಂದರ್ಶನ  ಜೀವನದಲ್ಲಿ ಮರಯೆಲಾಗದ ಅನುಭವನ್ನು ನೀಡುತ್ತದೆ. ಒಮ್ಮೆ ಇವುಗಳನ್ನು ನೋಡಿದಲ್ಲಿ ಯಾರು ಸಹ ಅವರ ಜೀವನದಲ್ಲಿ ಮರೆಯದೆ, ಪುನಃ ಪುನಃ ಅವರವರ ಅನುಭವ ಹಂಚಿಕೊಳ್ಳುವುದೇ ವಿಶೇಷ ಅನುಭವವಾಗುತ್ತದೆ. ಬಹಳಷ್ಟು ಪ್ರವಾಸಿಗರು ಇಷ್ಟೆಲ್ಲ ಅದ್ಭುತವಾದ  ಕಾಡಿನಲ್ಲಿ ಸಂಚರಿಸಿದರೂ ಸಹ ವನ್ಯ ಪ್ರಾಣಿಗಳು ನೋಡಲು ಸಿಗಲಿಲ್ಲವೆಂಬ ಕೊರಗಿರುತ್ತದೆ. ಆದರೆ ಅದಕ್ಕೆ ಪೂರಕವಾಗಿ ಸ್ಥಳೀಯ ಗೈಡ್ ಗಳು ಅರಣ್ಯದ ಹಾಗು ಅರಣ್ಯದಲ್ಲಿರುವ ವೈವಿಧ್ಯತೆಯ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿದವರಾಗಿದ್ದರೆ , ಇಂತಹ ಕೊರತೆಯನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ. ಅಂದರೆ ಅರಣ್ಯವೆಂದರೆ ಕೇವಲ ದೊಡ್ಡ ದೊಡ್ಡ ಮರಗಳು , ಪ್ರಾಣಿಗಳಷ್ಟೇ ಅಲ್ಲ,ಅಲ್ಲಿರುವ ಪ್ರತಿಯೊಂದು ಬಳ್ಳಿ ಪೊದೆ, ಕ್ರಿಮಿ ಕೀಟಗಳು, ದೊರೆಯುವ ಔಷಧೀಯ ಸಸ್ಯಗಳು, ಜೇನು, ಕೀಟದ ಗೂಡುಗಳು ಪಕ್ಷಿಗಳ ವಾಸ ಸ್ಥಳಗಳ ಪರಿಚಯ , ನೀರಿನ ಝುರಿಯ ಪರಿಚಯ , ಬಿದಿರು, ಬೆತ್ತ, ರೀಡ್ಸ್ ಪರಿಚಯ, ಹುತ್ತದ ಮಹತ್ವ ಇವೆಲ್ಲವುಗಳ ಪರಿಚಯದೊಂದಿಗೆ ಜೀವ ವೈವಿಧ್ಯತೆಯ ಮಹತ್ವ ವನ್ನು ಸಾರಿ ಹೇಳುವಂತ ಮಾರ್ಗದರ್ಶಕರ ಅವಶ್ಯಕತೆಯಿದೆ .  ಇದರಿಂದ ಬಹಳಷ್ಟು ನಿರುದ್ಯೋಗಿ ಯುವಕರು ಉದ್ಯೋಗವನ್ನು ಪಡೆದು ಸ್ಥಳೀಯ ಅರಣ್ಯದ ರಕ್ಷಣೆಗೆ ಪಣ ತೊಡಬಹುದಾಗಿದೆ. ಇದರಿಂದ ಪ್ರವಾಸಿಗರಲ್ಲೂ ಪರಿಸರ ಪ್ರಜ್ಞೆಯನ್ನು ಜಾಗೃತಗೊಳಿಸಿ ಪರಿಸರ ಸಂರಕ್ಷಣೆಗೆ ಕೈ ಗೂಡಿಸುವಂತೆ ಮಾಡಿ ವಿಶ್ವದಲ್ಲಿ ಏರುತ್ತಿರುವ ವಾತಾವರಣ ಉಷ್ಣತೆಯನ್ನು ಕಡಿಮೆಗೊಳಿಸುವಲ್ಲಿ ಪರಿಸರ ಪ್ರವಾಸಿಗರ ಪಡೆಯನ್ನು ನಿರ್ಮಿಸಿದ ಕೀರ್ತಿಗೆ ಪಾತ್ರರಾಗಬಹುದು.

 

Yana
ಯಾವ ಉದ್ಯಮಕ್ಕೂ ಕಡಿಮೆಯೆನಿಸದ ಪ್ರವಾಸೋದ್ಯಮ, ಜಿಲ್ಲೆಯ ಅಭಿವೃದ್ಧಿಯ ದೃಷ್ಠಿಯಿಂದ, ಅರಣ್ಯ ಮತ್ತು ಪರಿಸರ ರಕ್ಷಣೆ ಗೋಸ್ಕರ ಪ್ರವಸೋಧ್ಯಮದ ಅಭಿವೃಧಿಗೆ ಹೆಚ್ಚಿನ ಒತ್ತನ್ನು ನೀಡುವುದು ಜಿಲ್ಲೆಯ ಜನತೆಯ ಕರ್ತವ್ಯಗಳಲ್ಲಿ ಒಂದಾಗಬೇಕಿದೆ. ಹಸಿರಿನ ಮಧ್ಯದಲ್ಲಿ ನಡೆಸಬಹುದಾದ ಬೃಹತ್ ಉದ್ಯಮದ ಬೆಳವಣಿಗೆ ಜಿಲ್ಲೆಯ ಅಭಿವೃಧಿಗೆ ಮಹತ್ವದ ಕಾಣಿಕೆಯಾಗಲಿದೆ. ಇದು ಜಿಲ್ಲೆಯಲ್ಲಿರುವ ಜೀವ ವಿವಿಧ್ಯತೆಯ ರಕ್ಷಣೆಗೆ, ನೆಲ-ಜಲದ ರಕ್ಷಣೆಗೆ ಮಹತ್ವದ ಕೊಡುಗೆಯಾಗಲಿದೆ.

ಜಲಪಾತಗಳ ಜಿಲ್ಲೆ 

Magod waterfalls
ಅರಣ್ಯದ ಮಧ್ಯದಲ್ಲಿ ಧುಮ್ಮಿಕ್ಕುವ ಜಲಪಾತಗಳು ಅನೇಕ. ಸಾತೊಡ್ಡಿ, ಮಾಗೋಡ್, ಉಂಚಳ್ಳಿ, ಗಣೇಶ್ ಫಾಲ್ಸ್ ,  ವಜ್ರ ಜಲಪಾತ, ಲಾಲ್ ಗುಳಿ, ಅಣಶಿ ಜಲಪಾತಗಳು ಉಲ್ಲೇಖನೀಯ ವಾಗಿವೆ. ವರ್ಷದ ಸದಾ ಕಾಲದಲ್ಲಿ ಕೆಲವು ಧುಮುಕಿದರೆ, ಮಳೆಗಾಲ ದಲ್ಲಿ ಜಿಲ್ಲೆಯ ಯಾವುದೇ ಜಾಗದಲ್ಲಿ ಪ್ರಯಾಣಿಸಿದರು ಒಂದಲ್ಲ ಒಂದು ಜಲಪಾತಗಳನ್ನು ನೋಡಲು ಸಾಧ್ಯ. ಆದುದರಿಂದ ಈ ಜಿಲ್ಲೆಯನ್ನು "ಜಲಪಾತಗಳ" ಜಿಲ್ಲೆಯಂದು ಕರೆಯಬಹುದು. ಪ್ರವಾಸಿಗರ ಅನುಕೂಲಕ್ಕಾಗಿ  ಬೇಕಾದ ಸೌಕರ್ಯ ಗಳನ್ನೂ ಕಲ್ಪಿಸಿಕೊಡುವುದು ಪ್ರವಾಸೋದ್ಯಮ ಬೆಳವಣಿಗೆಗೆ ಅನುಕೂಲವಾಗುತ್ತೆದೆ. ಇವುಗಳ ಸಮೀಪವಿರುವ ಗ್ರಾಮದ ಜನರು ಸರಳ, ಸುಂದರ, ಸ್ವಚ್ಛ ವಸತಿ ವ್ಯವಸ್ಥೆ ಕಲ್ಪಿಸಿ, ಸ್ಥಳೀಯ ಆಹಾರವನ್ನು ನೀಡುವ ವ್ಯವಸ್ಥೆಯಾದಲ್ಲಿ ಪ್ರವಾಸಿಗರು ತಂಡೋಪ ತಂಡವಾಗಿ ಭೇಟಿ ನೀಡುವರು. ಬಂದಂತಹ ಪ್ರವಾಸಿಗರಿಗೆ ಜಲಪಾತದ ಮಹತ್ವ, ಸುತ್ತಲಿನ ಅರಣ್ಯ ಪ್ರದೇಶದ ಬಗ್ಗೆ ಮಾಹಿತಿ ನೀಡುವುದರಿಂದ ಮನಸಿನ ಉಲ್ಲಾಸದ ಜೊತೆಗೆ ಅರಣ್ಯ ಮತ್ತು ಪರಿಸರದ ಮಾಹಿತಿ, ಜಲಾನಯನ ಪ್ರದೇಶದ ರಕ್ಷಣೆಯ ಬಗ್ಗೆ ತಿಳುವಳಿಕೆ, ಜೀವ ವೈವಿಧ್ಯತೆಯ ಪರಿಚಯ ಪ್ರವಾಸಿಗರನ್ನು ಅಧ್ಯಯನಶೀಲರನ್ನಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರಕೃತಿಯು "ತೆರದ ಪುಸ್ತಕ" ವೆನ್ನುವ ಮಾತನ್ನು ಸಾಕಾರ ಗೊಳಿಸಲು ವಿಪುಲ ಅವಕಾಶಗಳಿವೆ. ಇದು ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಿ ತನ್ಮೂಲಕ ಜಿಲ್ಲೆಯ ಅರಣ್ಯ ರಕ್ಷಣೆಯ ಜೊತೆಗೆ, ಪ್ರವಾಸಿಗರಲ್ಲೂ ಅರಣ್ಯ ಪರಿಸರದ ರಕ್ಷಣೆಯೊಂದಿಗೆ ಜೀವ ವೈವಿಧ್ಯತೆಯ ಸಂದೇಶವನ್ನು ಸಾರಲು ಸಾಕಾರ ವಾಗುತ್ತದೆ. ವರ್ಷಗಳು ಕಳೆದಂತೆ ಪ್ರವಾಸೋದ್ಯಮದಿಂದ ಆದಾಯ ಹೆಚ್ಚಿದಂತೆ ಆಯಾ ಭಾಗದ ಗ್ರಾಮೀಣ ಜನರ ಅರ್ಥಿಕ ಪರಿಸ್ಥಿತಿಯು ಹೆಚ್ಚುವುದರೊಂದಿಗೆ ಅಭಿವೃದ್ಧಿ ಕಾಣಲು ಸಾಧ್ಯವಾಗುವುದು. ಈ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಹಾಗು ಪ್ರವಾಸೋದ್ಯಮ ಒಂದಕ್ಕೊಂದು  ಪೂರಕವಾಗಿ ಸಾಗಬೇಕಿದೆ. ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲೆಯ ವಿಶೇಷತೆಯ ಬಗ್ಗೆ ಪ್ರಚಾರ ನೀಡುವ ಕೆಲಸವಾಗ ಬೇಕಿದೆ. ಜಿಲ್ಲೆಯಲ್ಲಿ ಏನೆಲ್ಲಾ ಇದೆಯೆಂದು ಹೊರಗಿನ ಜನರಿಗೆ ತಿಳಿಸುವ ಕೆಲಸವಾದಾಗ, ಪ್ರವಾಸಿಗರಿಗೆ ದೊರೆಯುವ ಅನುಕೂಲಗಳ ಬಗ್ಗೆ ಪರಿಚಯಿಸಿದಾಗ, ಪ್ರವಾಸೋದ್ಯಮದ ಬೆಳೆವಣಿಗೆಯಾಗುತ್ತದೆ. ತನ್ಮೂಲಕ ಗ್ರಾಮೀಣಾಭಿವೃದ್ಧಿಗೆ ನಾಂದಿಯಾಗಲಿದೆ.
೨೦೦೭ ಕರ್ನಾಟಕ ವಿಕಾಸ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ