Pages

Saturday, November 20, 2010

ಶ್ರೀ ಗಂಧ ಮತ್ತೆ ಪಡೆಯ ಬಹುದು

ಶ್ರೀಗಂಧದ ಸಿರಿಯ ಬಗ್ಗೆ ಡಾ.ಅಶೋಕ್ ಹೆಗಡೆಯವರು  ಸಾರ್ವಜನಿಕರ ಮಾಹಿತಿಗಾಗಿ ಉಪಯುಕ್ತವಾದ ಸಂದೇಶ ನೀಡಿದ್ದಾರೆ. ಇಂತಹ ಲೇಖನಗಳು ಆಗಿಂದಾಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದರೆ ಸಾರ್ವಜನಿಕರು ಉತ್ತೇಜಿತರಾಗುತ್ತಾರೆ, ಅಲ್ಲದೆ ಜನರಲ್ಲಿರುವ  ಅನೇಕ ತಪ್ಪು ಕಲ್ಪನೆಗಳು ಅಂತ್ಯಗೊಂಡು ಉತ್ಸಾಹದಿಂದ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯಲು ಪ್ರಯತ್ನಿಸುವರು.

ಹಿಂದೆ ಶ್ರೀ ಗಂಧದ ಮರ ಎಲ್ಲೇ ಬೆಳೆದರು ಅದು ರಾಜ್ಯ ಸರ್ಕಾರದ ಸ್ವತ್ತಾಗಿತ್ತು . ಈ ಬಗ್ಗೆ ಸಾರ್ವಜನಿಕರಲ್ಲಿ ಇದ್ದ ತಪ್ಪು ಕಲ್ಪನೆ ಶ್ರೀ ಗಂಧದ ಬೆಳವಣಿಗೆಗೆ ಮಾರಕವಾಗಿತ್ತು. ಸರ್ಕಾರ 2001 ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಿದ್ದು ಸೆಕ್ಷನ 103 ರ ಪ್ರಕಾರ ಜಮೀನಿನ ಮಾಲೀಕರೆ  ಶ್ರೀಗಂಧದ ಮರದ ಮಾಲೀಕರಾಗುತ್ತಾರೆ. ಶ್ರೀ ಗಂಧ ವನ್ನು ಬೆಳೆಯಲು ಯಾವುದೆ ಅನುಮತಿ ಬೇಕಾಗಿರುವುದಿಲ್ಲ. ಅಲ್ಲದೆ ಶ್ರೀಗಂಧದ ಮಾರಾಟಕ್ಕಿದ್ದ ನಿರ್ಬಂಧವನ್ನು ಸರ್ಕಾರದ ೨೦೦೮ ರ  ನೋಟಿಫಿಕೇಶನ್ ನಲ್ಲಿ ಮತ್ತಷ್ಟು ಸರಳಗೊಳಿಸಲಾಗಿದೆ.

ರೈತರು ಜಮೀನುಗಳಲ್ಲಿ ಬೆಳೆದಿರುವ ಶ್ರೀ ಗಂಧದ ಮರವನ್ನು ಅರಣ್ಯ ಇಲಾಖಾ ಅನುಮತಿಯೊಂದಿಗೆ ನೇರವಾಗಿ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಾದ ಸಾಬೂನು ಕಾರ್ಖಾನೆ ಅಥವಾ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪೂರ್ವ ನಿರ್ಧಾರಿತ ದರದಲ್ಲಿ ಮಾರಾಟ ಮಾಡಬಹುದು. ಅಲ್ಲದೆ ಅರಣ್ಯ ಇಲಾಖಾ ಮುಖಾಂತರ ಸಹ ಮಾರಾಟ ಮಾಡಬಹುದು. ಶ್ರೀ ಗಂಧದ ವಿಲೇವಾರಿಯಲ್ಲಿ ಈಗಿರುವ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುವುಧು ಶ್ರೀಗಂಧದ ಬೆಳವಣಿಗೆಯ ಗತಿಯನ್ನು ಹೆಚ್ಚಿಸುವುದು ಒಂದು ಅಂಶವಾದರೆ ಈಗಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧ್ಯವಾದಲ್ಲಿ   ಜನರು ಬೆಳೆಯುವುದು ಮತ್ತೊಂದಾಗಿದೆ. 

ಸದಾ ಹಸಿರಾಗಿರುವ ಮೇಕೆ ಮೇಯಿಸಲು ಸೊಪ್ಪಿನಿಂದ ಗಂಧ ತೇಯುವ ಬೇರಿನ ತುದಿಯವರೆಗೂ ಪರಿಪೂರ್ಣವಾಗಿ  ಉಪಯೋಗದಲ್ಲಿರುವ ಏಕೈಕ ಮರವಾಗಿದೆ. ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವ ಮರ ಇದಾಗಿದ್ದು ಹೆಚ್ಚುತ್ತಿರುವ ಭೂತಾಪಮಾನವನ್ನು ಕಡಿಮೆ ಗೊಳಿಸಿ  ಪರಿಸರ ರಕ್ಷಣೆಗೆ ಸಹಕಾರಿಯಾಗುವುದು, ಜೊತೆಗೆ ಶ್ರೀಗಂಧಕ್ಕಿರುವ ಉತ್ತಮ ಬೆಲೆ ಅರ್ಥಿಕ ಸಧೃಡತೆಯನ್ನೂ ತಂದು ಕೊಡುವುದು. ಇಷ್ಟೆಲ್ಲಾ ಲಾಭ ತರುವ ಬೆಳೆಯ ರಕ್ಷಣೆ ಸರಿಯಾಗಿ ನಿರ್ವಹಿಸಿದರೆ, ಲಾಭದ ಪ್ರಮಾಣ ಅಗಾಧ, ಇದರಿಂದ ಬೆಳೆದವರಿಗೆ ಅರ್ಥಿಕ ಚೇತರಿಕೆಯೊಂದಿಗೆ,  ಕಳೆದುಕೊಂಡ ಗಂಧವನ್ನು ಪುನಃ ಪಡೆಯ ಬಹುದಾಗಿದೆ
( ದಿ 22-3-10  ಪ್ರಜಾವಾಣಿ ದಿನ  ಪತ್ರಿಕೆಯಲ್ಲಿ ಪ್ರಕಟವಾದ ಲೇಖನ )

No comments:

Post a Comment