Pages

Friday, November 26, 2010

ಶ್ರೀಗಂಧ ಇಲ್ಲೊಂದಷ್ಟು ಸತ್ಯಗಳು

ಕರ್ನಾಟಕ  ಅಂದರೆ ಅದು ಶ್ರೀಗಂಧದ  ಬೀಡು ಎನ್ನುವ  ಮಾತು ಈಗಲೂ  ಚಾಲ್ತಿಯಲ್ಲಿದೆ.  ಇಡೀ ದೇಶದಲ್ಲಿ  ಶ್ರೀ ಗಂಧದ  ಶ್ರೀಮಂತಿಕೆಯನ್ನು  ಪಡೆದ ರಾಜ್ಯ ಎಂಬ  ಹೆಗ್ಗಳಿಕೆ ನಮ್ಮದು .  ಕರ್ನಾಟಕದ  ಇತಿಹಾಸದಲ್ಲಿಯೂ  ಶ್ರೀಗಂಧಕ್ಕೆ ಪಾಲಿದೆ.  ರಾಜ್ಯದ ಇತಿಹಾಸವನ್ನು ತಿಳಿಯುತ್ತಲೇ  ಶ್ರೀಗಂಧದ  ಮಹತ್ವ, ಅಗತ್ಯಗಳನ್ನು  ತಿಳಿಯುವಷ್ಟರ ಮಟ್ಟಿಗೆ  ಎರಡೂ ಒಂದನ್ನೊಂದು  ಬೆಸೆದುಕೊಂಡಿದೆ.  ಇಡೀ ದೇಶದಲ್ಲಿರುವ  ಇತರೆ ರಾಜ್ಯಗಳಿಗೆ ಶ್ರೀಗಂಧ ಏಕೆ ಇಷ್ಟೊಂದು ನಿಕಟವಾಗಿಲ್ಲಾ  ಎನ್ನುವ ಪ್ರಶ್ನೆ  ಅನಗತ್ಯವಾದರೂಕನ್ನಡ ನಾಡಿನಲ್ಲಿ  ಶ್ರೀಗಂಧ ಬೆಳೆಯಲು ಪೂರಕ ವಾತಾವರಣವಿದೆ ಎನ್ನುವುದು ಖರೆ. ಇದು ನಾಡ ಜನರ ಭಾವನಾತ್ಮಕ  ಸಂಬಂಧ ಹೊಂದಿರುವುದರಿಂದ ಶ್ರೀಗಂಧದ ತವರು ಕನ್ನಡ  ನೆಲವೇ ಆಗಿದೆ.  ಇದಕ್ಕೆ  ಜಾತಿಮತ ಭೇದವಿಲ್ಲ.  ನಮ್ಮೆಲ್ಲರ  ದುರ್ಗಂಧ ಹೋಗಲಾಡಿಸಲು ಬೇಕು ಶ್ರೀಗಂಧ, ಮೇಕೆ ಮೇಯಿಸಲು ಸೊಪ್ಪಿನಿಂದ ಗಂಧ ತೇಯುವ ಬೇರಿನ ತುದಿಯವರೆಗೂ ಪರಿಪೂರ್ಣವಾಗಿ ಉಪಯೋಗದಲ್ಲಿರುವ  ಏಕೈಕ ಮರ ಶ್ರೀಗಂಧ. ಶ್ರೀಗಂಧ ಅಥವಾ ಚಂದನ ಎನ್ನುವುದು ಸುವಾಸನೆ ಭರಿತ ಹೃದಯಭಾಗದ ಶ್ರೀಗಂಧದ ಮರಗಳಿಂದ ಪಡೆಯಬಹುದಾದ ವಸ್ತು. ಶ್ರೀಗಂಧದ ಎಣ್ಣೆಯು ಬಹಳ ಹಿಂದಿನಿಂದಲೂ ಸುಗಂದಭರಿತ ಸುವಾಸನೆಯುಳ್ಳ ವಸ್ತುಗಳ ತಯಾರಿಕೆಯಲ್ಲಿ  ಉಪಯೋಗಿಸುತ್ತಿರುವ ಸ್ವಾಭಾವಿಕ ಎಣ್ಣೆಯಾಗಿದೆ. ಇದನ್ನು ವಿಶೇಷವಾಗಿ ಔಷಧಿಗಳ ತಯಾರಿಕೆಯಲ್ಲಿ, ಉದುಬತ್ತಿ ತಯಾರಿಕೆಯಲ್ಲಿ ಹಾಗು ಸುವಾಸನೆಯುಕ್ತ ಸೆಂ‍ಟ್‌ಗಳ  ತಯಾರಿಕೆಯಲ್ಲಿ ಬಳಸಲಾಗುತ್ತದೆ. ಶ್ರೀಗಂಧದ ಮರದ ಗ್ರೈನ್‍ಗಳು ಬಹಳ ಒತ್ತಾಗಿರುವುದರಿಂದ ಹಾಗು ಕೆತ್ತನೆ ಕೆಲಸಕ್ಕೆ ಹೇಳಿ ಮಾಡಿಸಿರುವಂಥ ಮರವಾಗಿರುವುದರಿಂದ  ವಿಶ್ವದಾದ್ಯಂತ ಕೆತ್ತನೆ ಕೆಲಸಕ್ಕೆ ಅದರಲ್ಲೂ ಸುಂದರ ಗೊಂಬೆಗಳ ಕೆತ್ತನೆ ಮತ್ತು ಜ್ಯುವೆಲರಿಬಾಕ್ಸ್‌ಗಳ ತಯಾರಿಕೆಯಲ್ಲಿ ಉಪಯೋಗಿಸಲ್ಪಡುತ್ತದೆ.
 
ಇಷ್ಟೆಲ್ಲಾ ಹೆಗ್ಗಳಿಕೆ, ಅಭಿಮಾನಗಳನ್ನು  ಸರಿಸಿ ನೋಡಿದರೆ ಶ್ರೀಗಂಧ ಬರಡಾಗಿರುವ ಅಂಶ ರಾಚುತ್ತದೆ .  ಆದರೆ ಬರಡು ಭೂಮಿಯಲ್ಲಿ  ಶ್ರೀಗಂಧ ಬೆಳೆದರೂ ಕೊಡುವುದು ಸುಗಂಧದ ಕೊರಡು.  ಇಂತಹ  ಅದ್ಭುತವಾದ ಗುಣ ಹೊಂದಿರುವ ಚಂದನ ಮರವನ್ನು  ಉಳಿಸಿ, ಬೆಳೆಸಿ ಬಳಸುವ ಅನಿವಾರ್ಯ  ಉಂಟಾಗಿದೆ. ಇದಕ್ಕೆ  ಕಾರಣಗಳೇನು ಎಂದು  ಹುಡುಕುತ್ತ ಹೋದರೆ ಹಲವು ಅಂಶಗಳು ತೆರೆದುಕೊಳ್ಳುತ್ತಾ  ಹೋಗುತ್ತವೆ.  ಸಾಮಾಜಿಕ, ರಾಜಕೀಯ , ಅರ್ಥಿಕ ಕಾರಣಗಳು ಇವೆ.  ಸ್ವಾರ್ಥ ಲಾಲಸೆ, ಸಾರ್ವಜನಿಕರ  ನಿರ್ಲಕ್ಷೆ  ಶ್ರೀಗಂಧವನ್ನು  ನಿಸ್ಸಾರ  ಮಾಡುತ್ತಿದೆ.  ಶ್ರೀಗಂಧಕ್ಕೆ  ಬೆಲೆ ಬಂದಂತೆ ಇದರ  ಕಳ್ಳ ದಾರಿಯ ಬಿಕರಿ ಹೆಚ್ಚಾಗಿದೆ .  ಒಂದರ್ಥದಲ್ಲಿ ಅದರಲ್ಲಿರುವ  ಸದ್ಗುಣಗಳೇ ಅದರ ಅಸ್ತಿತ್ವಕ್ಕೆ  ಮಾರಕವಾಗಿದೆ. ಇನ್ನೊಂದರ್ಥದಲ್ಲಿ    ಶ್ರೀಗಂಧಕ್ಕೆ  ಅವು ಅಮರತ್ವವನ್ನೂ   ಸಹ ತಂದುಕೊಟ್ಟಿದೆ. 

2001 ನೇ ಸಾಲಿಗಿಂತಲೂ ಮೊದಲು ಶ್ರೀಗಂಧದ ಮರ ಎಲ್ಲೇ ಬೆಳೆದರೂ ಅದು ಕರ್ನಾಟಕ ಅರಣ್ಯ ಕಾಯ್ದೆ 1963 ರಂತೆ ರಾಜ್ಯ ಸರ್ಕಾರದ ಸ್ವತ್ತಾಗಿತ್ತು  ಹಾಗು ಅದರ  ಕಟಾವು , ಸಾಗಣಿಕೆ  ಮತ್ತು ಮಾರಾಟದ ವಹಿವಾಟನ್ನು ಅರಣ್ಯ ಇಲಾಖೆಯಿಂದಲೇ ನಿರ್ವಹಿಸಲಾಗುತ್ತಿತ್ತು. ಖಾಸಗಿ ಜಮೀನಿನಲ್ಲಿ ಬೆಳೆದ ಶ್ರೀಗಂಧದ ಮರಕ್ಕೆ ಹಿಡುವಳಿದಾರರಿಗೆ ಮರಗಳನ್ನು ಬೆಳೆದು ಸಂರಕ್ಷಿಸುವುದಕ್ಕಾಗಿ ಮರದ ಮೌಲ್ಯದ ಬದಲಿಗೆ ಉತ್ತೇಜನ ಹಣವನ್ನು ಬೋನಸ್ ಮುಖಾಂತರ ನೀಡಲಾಗುತ್ತಿತ್ತು. ಇದರಿಂದಾಗಿ ಸಾರ್ವಜನಿಕರಲ್ಲಿ  ಮೊಳೆತಿದ್ದ  ಅಸಮಾಧಾನ ಹಾಗು ತಪ್ಪು ಕಲ್ಪನೆ ಇದರ ಬೆಳವಣಿಗೆಯಲ್ಲಿ ಮಾರಕವಾಗಿತ್ತು. ಇದನ್ನು ಮನಗಂಡ ಸರ್ಕಾರ ಚಾಲ್ತಿಯಲ್ಲಿದ್ದ ಕಾನೂನಿಗೆ ತಿದ್ದುಪಡಿ ಮಾಡಿದೆ. ಅರಣ್ಯ (ತಿದ್ದುಪಡಿ) ಕಾಯಿದೆ 2001  ರಲ್ಲಿ ಸೆಕ್ಷನ್  103 ರ ಪ್ರಕಾರ ಜಮೀನಿನ ಮಾಲೀಕರೇ ಶ್ರೀಗಂಧದ ಮರದ ಮಾಲೀಕರಾಗುತ್ತಾರೆ ಹಾಗು ಬೋನಸ್ ಬದಲಿಗೆ ಮರದ ಮೌಲ್ಯವನ್ನು ನೀಡಲಾಗುವುದು. 

ಶ್ರೀಗಂಧದ ಮಾರಾಟಕ್ಕಿದ್ದ ನಿರ್ಬಂಧವನ್ನು ಸಡಿಲಿಸಲಾಗಿದ್ದು ರೈತರು ಜಮೀನುಗಳಲ್ಲಿ ಬೆಳೆದಿರುವ ಶ್ರೀಗಂಧದ ಮರವನ್ನು ಅರಣ್ಯ ಇಲಾಖಾ ಅನುಮತಿಯೊಂದಿಗೆ ನೇರವಾಗಿ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಾದ ಕರ್ನಾಟಕ ಸಾಬೂನು ಕಾರ್ಖಾನೆ ಅಥವಾ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪೂರ್ವ ನಿರ್ಧಾರಿತ ದರದಲ್ಲಿ ಮಾರಾಟ ಮಾಡಬಹುದು. ಅಲ್ಲದೆ ಅರಣ್ಯ ಇಲಾಖಾ ಮುಖಾಂತರ ಸಹ ಮಾರಾಟ ಮಾಡಬಹುದು ಸಾರ್ವಜನಿಕ ಉದ್ದಿಮೆಗಳ ಹಾಗು ರಕ್ಷಣಾ ಇಲಾಖಾ ಆವರಣಗಳಲ್ಲಿ ಶ್ರೀಗಂಧದ ಮರದ ಬೆಳವಣಿಗೆಯನ್ನು ಉತ್ತೇಜಿಸಲು ಮರಗಳ ಮಾಲಿಕತ್ವವನ್ನು ಸಹ ಸಂಬಂಧಿಸಿದವರಿಗೆ ನೀಡಲಾಗಿದ್ದು ಅದರಿಂದ ಬರುವ ಆದಾಯವನ್ನು ಅವರೇ ಪಡಯಬಹುದಾಗಿದೆ. ರಾಜ್ಯದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರತಿ ವರ್ಷ ಪ್ರಚಲಿತ ಮಾರುಕಟ್ಟೆ ದರವನ್ನು ಆಧಾರವಾಗಿಟ್ಟುಕೊಂಡು ಶ್ರೀಗಂಧ ಮರದ ಬೆಲೆಯನ್ನು ನಿಗದಿಪಡಿಸುತ್ತಾರೆ.        

ಶ್ರೀಗಂಧ ಮರದ ಬೆಲೆಯು ಮರದ ಗುಣಮಟಕ್ಕೆ  ಅನುಗುಣವಾಗಿರುತ್ತದೆ.  ೨೦೦೮-೨೦೦೯ನೇ ಸಾಲಿಗೆ ಅರಣ್ಯ ಇಲಾಖೆ ನಿಗದಿಪಡಿಸಿರುವ ಶ್ರೀಗಂಧದ ಬೆಲೆ,  ಉತ್ಕೃಷ್ಟ  ಗುಣಮಟ್ಟದ     ವರ್ಗೀಕೃತ ಶ್ರೀಗಂಧ ಪೃತಿ ಟನ್‌ಗೆ ರೂ. 20,02,000 ಹಾಗೂ ಇದರಲ್ಲಿ  16   ವರ್ಗೀಕೃತ ಶ್ರೀಗಂಧವನ್ನಾಗಿ ಪರಿವರ್ತಿಸಲಾಗಿದೆ .  ಮರಗಳನ್ನು  ಕಟಾವು ಮಾಡಿದ ನಂತರ ಶ್ರೀಗಂಧದ ಸಾಗಣೆ, ಪರಿವರ್ತನೆ ಮತ್ತು  ಉಸ್ತುವಾರಿ  ವೆಚ್ಚನ್ನು  ಅರಣ್ಯ ಇಲಾಖೆಗೆ ನೀಡಬೇಕಾಗುತ್ತದೆ .  ಇಲಾಖೆಯ ನಿಗದಿಪಡಿಸಿರುವ  ದರವನ್ನು ಮಾನದಂಡವನ್ನಾಗಿಟ್ಟುಕೊಂಡು   ಸರಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ನೇರವಾಗಿ ಮಾರಾಟ ಮಾಡಬಹುದು. 
 
ಶ್ರೀಗಂಧ ಬೆಳೆಯುವುದು ಸುಲಭ ಆದರೆ ವಿಲೇವಾರಿ ಮಾಡುವುದು ಬಹಳ ಕಷ್ಟ ಎನ್ನುವ ಅಭಿಪ್ರಾಯ ರೈತ ವರ್ಗದಲ್ಲಿದೆ.  ಬಹುತೇಕರಿಗೆ ಶ್ರೀಗಂಧ ಬೆಳೆ ನಿಯಮಗಳಲ್ಲಿ ಆದ ಮಾರ್ಪಾಡಿನ ಬಗ್ಗೆ ಅರಿವಿಲ್ಲ.  ಬಲಿತ ಮರಗಳನ್ನು  ಕಟಾವು ಮಾಡಲು ಇದ್ದ  ನಿಯಮಗಳನ್ನು ಸರಳೀಕರಣಗೊಳಿಸಲಾಗಿದೆ.  ಅದರ ಪ್ರಕಾರ  ಹಿಡುವಳಿ ಜಮೀನಿನಲ್ಲಿ  ಬೆಳೆದಿರುವ ಶ್ರೀಗಂಧದ ಮರಗಳನ್ನು  ವಿಲೇವಾರಿ ಮಾಡುವವರು ಸಮೀಪದ ವಲಯ  ಅರಣ್ಯಾಧಿಕಾರಿಗಳಿಗೆ ನಮೂನೆ12 ರಲ್ಲಿ  ಗ್ರಾಮ  ಸರ್ವೇ  ನಂಬರ್, ಹಾಗೂ ಜಮೀನಿಗೆ ಸಂಬಂಧಿಸಿದ ಇತರೆ ವಿವರಗಳೊಂದಿಗೆ,   ಮರಗಳ ಪಟ್ಟಿಯೊಂದಿಗೆ,  ಒಪ್ಪಿಗೆ  ಪತ್ರದ  ಸಮೇತ (ನಮೂನೆ 13 ರಲ್ಲಿ) ಅರ್ಜಿಯನ್ನು  ನೀಡಬೇಕು.  ಅರ್ಜಿದಾರರು ಬಲಿತ ಶ್ರೀಗಂಧದ ಮರಗಳನ್ನು  ಯಾರಿಗೆ ಮಾರಾಟ ಮಾಡಲು ಇಚ್ಛೆಇದೆಯಂದು  ಸಹ ಅದರಲ್ಲಿ ತಿಳಿಸಬೇಕಾಗುತ್ತದೆ .  ವಲಯ ಅರಣ್ಯಾ ಧಿಕಾರಿಗಳು ಅರ್ಜಿಯನ್ನು  ಸ್ವಿಕರಿಸಿದ ನಂತರ ಸ್ಥಳಕ್ಕೆ  ಭೇಟಿ ನೀಡಿ, ಪರಿಶೀಲಿಸಿ 30 ದಿನಗಳೊಳಗಾಗಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ವರದಿಯನ್ನು   ಕಳುಹಿಸಿರುತ್ತಾರೆ.  ಅವರು ಕಟಾವಿಗೆ ಯೋಗ್ಯವಿದ್ದಲ್ಲಿ  ವಲಯ  ಅರಣ್ಯಾಧಿಕಾರಿಗಳಿಂದ ವರದಿ ಪಡೆದ 15 ದಿವಸಗಳೊಳಗೆ ಅನುಮತಿಯನ್ನು  ನೀಡುತ್ತಾರೆ .
 
 ಕಟಾವಿಗೆ ಅನುಮತಿ ದೊರೆತ ನಂತರ ಮರಗಳನ್ನು  ಬುಡಸಮೇತ ತೆಗೆದು, ತುಂಡುಗಳಾಗಿ  ಕತ್ತರಿಸಿ, ಸಾಗಾಣೆ ಮಾಡುವವರೆಗೆ ಒಂದು  ಕಡೆ ಸುರಕ್ಷಿತವಾಗಿ ಸಂಗ್ರಹಿಸಿಡಬೇಕು  .  ಕಟಾವಿಗೆ ತಗಲುವ ವೆಚ್ಚವನ್ನು ಮರದ ಮಾಲೀಕರೇ ಭರಿಸಬೇಕು ಎನ್ನುವುದು ಗೊತ್ತಿರಬೇಕಾದ ವಿಚಾರ.  ಈ ಎಲ್ಲ  ಕೆಲಸಗಳು ಅರಣ್ಯ ಇಲಾಖಾ ಸಿಬ್ಬಂದಿಯ  ಮೇಲುಸ್ತುವಾರಿಯಲ್ಲಿ  ನಡೆಯುವುದು ಕ್ಷೇಮಕರ.  ಮಾಲೀಕರು ಯಾರಿಗೆ ಮಾರಲು ಇಚ್ಛಿಸುವರೋ ಅಲ್ಲಿಗೆ ಅರಣ್ಯ  ಇಲಾಖಾ ರಹದಾರಿಯೊಂದಿಗೆ , ಸಿಬ್ಬಂದಿಯ  ಉಸ್ತುವಾರಿಯೊಂದಿಗೆ  ಸಾಗಾಣೆ ಮಾಡಬಹುದು.

ಕೃಷಿಕರಿಗೆ ಶ್ರೀಗಂಧ ಬೆಳೆಯುವುದೇನು ಹೊಸ ವಿದ್ಯೆಯಲ್ಲ.  ಮಳೆಗಾಲದ ಪ್ರಾರಂಭದೊಂದಿಗೆ  ಭೂಮಿಯನ್ನು  ಹಸನುಗೊಳಿಸಿ ಬೆಳೆಯನ್ನು  ಬಿತ್ತುವ  ಸಮಯ ಗಿಡಮರಗಳನ್ನು  ಸಹ ನಾಟಿ ಮಾಡಲು ಒಳ್ಳೆಯ ಸಮಯವಾಗಿರುತ್ತದೆ. ಜಮೀನಿನಲ್ಲಿ  ಶ್ರೀಗಂಧದ ತೋಟವನ್ನು  ನಿರ್ಮಿಸಿರುವ  ರೈತರು ಪ್ರತಿ  ಸಸಿಯಿಂದ  ಇನ್ನೊಂದು   ಸಸಿಗೆ 4 ರಿಂದ 5   ಮೀಟರ್ ಅಂತರದಂತೆ ಒಂದು  ಎಕರೆಗೆ ಅಂದಾಜು 200 ಸಸಿಗಳನ್ನು  ನಾಟಿ ಮಾಡಬಹುದು. ಶ್ರೀಗಂಧವು ಪರಾವಲಂಬಿ ಸಸ್ಯವಾಗಿರುವುದರಿಂದ (ಪಾರ್ಶಿಯಲ್ ರೂಟ್ ಪ್ಯಾರಸೈಟ್) ನಾಟಿ ಮಾಡುವ ಸಮಯದಲ್ಲಿ  ಸಸಿಗಳ ಜತೆಯಲ್ಲಿ  ತಾತ್ಕಾಲಿಕ  ಅತಿಥೇಯ  ಸಸ್ಯವಿಲ್ಲದಿದ್ದರೆ , ಶ್ರೀಗಂಧದ ಸಸಿಗಳ ಪಕ್ಕದಲ್ಲಿಯೇ  ಸಸ್ಸ್ಬೇನಿಯಾದಂಥ ಅತಿಥೇಯ ಸಸಿಗಳನ್ನು  ನಾಟಿ ಮಾಡಬೇಕಾಗುತ್ತದೆ.  ಶ್ರೀಗಂಧದ ಮರ ಹಸಿರೆಲೆಗಳಿಂದ ತನಗೆ ಬೇಕಾದ ಆಹಾರ ತಯಾರಿಸಿಕೊಂಡರೂ, ಭೂಮಿಯಿಂದ  ತನ್ನ  ಬೆಳವಣಿಗೆಗೆ ಬೇಕಾದ ನೀರು ಮತ್ತು  ಪೌಷ್ಠಿಕಾಂಶಗಳನ್ನು ಪಡೆದುಕೊಳ್ಳಲು  ಬೇರೊಂದು ಅತಿಥೇಯ ಸಸ್ಯದ  ಬೇರಿನ ಅವಶ್ಯಕತೆಯಿದೆ .  ಅಲ್ಲದೆ  ಜಮೀನಿನ ಸುತ್ತಲು  ಬೇಲಿಯಿದ್ದಲ್ಲಿ ಶ್ರೀಗಂಧದ ಮರಗಳನ್ನು  ಬೆಳೆಸಬಹುದಾಗಿದೆ.  ಇಂತಹ  ಸಸ್ಯಗಳ ಲಾಭ ಪಡೆದು ಶ್ರೀಗಂಧದ  ಮರಗಳನ್ನು  ಬೆಳೆಸಬಹುದು. 

ಸಾಮಾನ್ಯವಾಗಿ ಶ್ರೀಗಂಧದ ಮರಗಳು 25 ರಿಅದ 30 ವರ್ಷಕ್ಕೆ   ಕೊಯ್ಲಿಗೆ  ಬರುತ್ತವೆ. ಮರಗಳ ಕೊನೆಗಳು ಒಣಗುವುದೇ ಬಲಿತಿದೆಯೆನ್ನುವುದರ ಕುರುಹು.  ಇಲ್ಲಿ  ಗಮನಿಸಬೇಕಾದ ಅಂಶವೆಂದರೆ  ಮರ ಎಷ್ಟು ದಪ್ಪವಿದೆ  ಎನ್ನುವುದಕಿಂತ  ಮುಖ್ಯವಾಗಿ ಮರದಲ್ಲಿ  ಎಷ್ಟು  ಪ್ರಮಾಣದ  ಸುವಾಸನೆಭರಿತ ಕಚ್ಚಿನ  ಅಂಶ ಇದೆ ಎನ್ನುವುದು ಮುಖ್ಯ ಹಾಗೂ ಮರದ ಬೇರಿನಲ್ಲು  ಸಹ ಸುವಾಸನೆ ಇರುವುದ ರಿಂದ ಮರಗಳನ್ನು  ಬುಡ ಸಮೇತ ತೆಗೆಯಬೇಕಾಗುತ್ತದೆ. 

ಒಂದು  ಎಕರೆಯಲ್ಲಿ  200 ಗಿಡಗಳನ್ನು  ಹಾಕುವುದರಿಂದ  ಇವುಗಳಲ್ಲಿ  ಶೇ. 10 ರಷ್ಟನ್ನು  ವಿವಿಧ ಕಾರಣಗಳಿಂದ ಗಣನೆಗೆ ತೆಗೆದುಕೊಳ್ಳದಿದ್ದರೂ ಸಹ,  ಒಂದು  ಎಕರೆಯಲ್ಲಿ ಶ್ರೀಗಂಧ ಬೆಳೆಯುವುದರಿಂದ  (30 ವರ್ಷಕ್ಕೆ) ಐವತ್ತೈದು ಲಕ್ಷ  ಆದಾಯ ಬರುತ್ತದೆ  ಎನ್ನುವುದು ತುಂಬಾ  ಉತ್ಪ್ರೇಕ್ಷೆಯನಿಸಿದರೂ,  ಇದೊಂದು  ಲಾಭದ  ಬೆಳೆಯೆಂದು  ಹೇಳಬಹುದು.  ಇದರಿಂದ  ಗ್ರಾಮೀಣ  ಪ್ರದೇಶದಲ್ಲಿ  ರೈತರಿಗೆ ಉದ್ಯೋಗ  ವೃದ್ಧಿಯಾಗುವುದಲ್ಲದೆ , ಅರ್ಥಿಕವಾಗಿ ಸಬಲರಾಗುವ ಸಾಧ್ಯತೆ  ಹೆಚ್ಚಿದೆ . 
          
ಇಷ್ಟೆಲ್ಲಾ  ಲಾಭತರುವ ಬೆಳೆಯ ರಕ್ಷಣೆ  ನಿಜವಾಗಲೂ ಕಷ್ಟವೇ .  ಆದರೆ ರಕ್ಷಣೆ  ಸರಿಯಾಗಿ ಮಾಡಿದರೆ ಲಾಭದ ಪ್ರಮಾಣ ಅಗಾಧ.  ಇದರಿಂದ  ರೈತರಿಗೆ ಅರ್ಥಿಕ ಚೇತರಿಕೆ ಉಂಟಾಗಬಹುದು. ಶ್ರೀಗಂಧ ಬೆಳೆದು ಶ್ರೀಗಂಧದ ನಾಡನ್ನು  ಉಳಿಸಿ-ಬೆಳೆಸಿ ಸ್ವಾವಲಂಬಿಗಳೂ ಆಗಬಹುದಲ್ಲವೇ!.
(29-Oct-2009 ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರಕಟವಾದ ಲೇಖನ )

Saturday, November 20, 2010

ಶ್ರೀ ಗಂಧ ಮತ್ತೆ ಪಡೆಯ ಬಹುದು

ಶ್ರೀಗಂಧದ ಸಿರಿಯ ಬಗ್ಗೆ ಡಾ.ಅಶೋಕ್ ಹೆಗಡೆಯವರು  ಸಾರ್ವಜನಿಕರ ಮಾಹಿತಿಗಾಗಿ ಉಪಯುಕ್ತವಾದ ಸಂದೇಶ ನೀಡಿದ್ದಾರೆ. ಇಂತಹ ಲೇಖನಗಳು ಆಗಿಂದಾಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದರೆ ಸಾರ್ವಜನಿಕರು ಉತ್ತೇಜಿತರಾಗುತ್ತಾರೆ, ಅಲ್ಲದೆ ಜನರಲ್ಲಿರುವ  ಅನೇಕ ತಪ್ಪು ಕಲ್ಪನೆಗಳು ಅಂತ್ಯಗೊಂಡು ಉತ್ಸಾಹದಿಂದ ಹೆಚ್ಚು ಶ್ರೀಗಂಧದ ಮರಗಳನ್ನು ಬೆಳೆಯಲು ಪ್ರಯತ್ನಿಸುವರು.

ಹಿಂದೆ ಶ್ರೀ ಗಂಧದ ಮರ ಎಲ್ಲೇ ಬೆಳೆದರು ಅದು ರಾಜ್ಯ ಸರ್ಕಾರದ ಸ್ವತ್ತಾಗಿತ್ತು . ಈ ಬಗ್ಗೆ ಸಾರ್ವಜನಿಕರಲ್ಲಿ ಇದ್ದ ತಪ್ಪು ಕಲ್ಪನೆ ಶ್ರೀ ಗಂಧದ ಬೆಳವಣಿಗೆಗೆ ಮಾರಕವಾಗಿತ್ತು. ಸರ್ಕಾರ 2001 ರಲ್ಲಿ ಅರಣ್ಯ ಕಾಯ್ದೆಗೆ ತಿದ್ದುಪಡಿ ತಂದಿದ್ದು ಸೆಕ್ಷನ 103 ರ ಪ್ರಕಾರ ಜಮೀನಿನ ಮಾಲೀಕರೆ  ಶ್ರೀಗಂಧದ ಮರದ ಮಾಲೀಕರಾಗುತ್ತಾರೆ. ಶ್ರೀ ಗಂಧ ವನ್ನು ಬೆಳೆಯಲು ಯಾವುದೆ ಅನುಮತಿ ಬೇಕಾಗಿರುವುದಿಲ್ಲ. ಅಲ್ಲದೆ ಶ್ರೀಗಂಧದ ಮಾರಾಟಕ್ಕಿದ್ದ ನಿರ್ಬಂಧವನ್ನು ಸರ್ಕಾರದ ೨೦೦೮ ರ  ನೋಟಿಫಿಕೇಶನ್ ನಲ್ಲಿ ಮತ್ತಷ್ಟು ಸರಳಗೊಳಿಸಲಾಗಿದೆ.

ರೈತರು ಜಮೀನುಗಳಲ್ಲಿ ಬೆಳೆದಿರುವ ಶ್ರೀ ಗಂಧದ ಮರವನ್ನು ಅರಣ್ಯ ಇಲಾಖಾ ಅನುಮತಿಯೊಂದಿಗೆ ನೇರವಾಗಿ ಸರ್ಕಾರೀ ಸ್ವಾಮ್ಯದ ಸಂಸ್ಥೆಗಳಾದ ಸಾಬೂನು ಕಾರ್ಖಾನೆ ಅಥವಾ ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮಕ್ಕೆ ಪೂರ್ವ ನಿರ್ಧಾರಿತ ದರದಲ್ಲಿ ಮಾರಾಟ ಮಾಡಬಹುದು. ಅಲ್ಲದೆ ಅರಣ್ಯ ಇಲಾಖಾ ಮುಖಾಂತರ ಸಹ ಮಾರಾಟ ಮಾಡಬಹುದು. ಶ್ರೀ ಗಂಧದ ವಿಲೇವಾರಿಯಲ್ಲಿ ಈಗಿರುವ ನಿರ್ಬಂಧಗಳನ್ನು ಮತ್ತಷ್ಟು ಸಡಿಲಗೊಳಿಸುವುಧು ಶ್ರೀಗಂಧದ ಬೆಳವಣಿಗೆಯ ಗತಿಯನ್ನು ಹೆಚ್ಚಿಸುವುದು ಒಂದು ಅಂಶವಾದರೆ ಈಗಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಸಾಧ್ಯವಾದಲ್ಲಿ   ಜನರು ಬೆಳೆಯುವುದು ಮತ್ತೊಂದಾಗಿದೆ. 

ಸದಾ ಹಸಿರಾಗಿರುವ ಮೇಕೆ ಮೇಯಿಸಲು ಸೊಪ್ಪಿನಿಂದ ಗಂಧ ತೇಯುವ ಬೇರಿನ ತುದಿಯವರೆಗೂ ಪರಿಪೂರ್ಣವಾಗಿ  ಉಪಯೋಗದಲ್ಲಿರುವ ಏಕೈಕ ಮರವಾಗಿದೆ. ಇಷ್ಟೆಲ್ಲಾ ಮಹತ್ವವನ್ನು ಹೊಂದಿರುವ ಮರ ಇದಾಗಿದ್ದು ಹೆಚ್ಚುತ್ತಿರುವ ಭೂತಾಪಮಾನವನ್ನು ಕಡಿಮೆ ಗೊಳಿಸಿ  ಪರಿಸರ ರಕ್ಷಣೆಗೆ ಸಹಕಾರಿಯಾಗುವುದು, ಜೊತೆಗೆ ಶ್ರೀಗಂಧಕ್ಕಿರುವ ಉತ್ತಮ ಬೆಲೆ ಅರ್ಥಿಕ ಸಧೃಡತೆಯನ್ನೂ ತಂದು ಕೊಡುವುದು. ಇಷ್ಟೆಲ್ಲಾ ಲಾಭ ತರುವ ಬೆಳೆಯ ರಕ್ಷಣೆ ಸರಿಯಾಗಿ ನಿರ್ವಹಿಸಿದರೆ, ಲಾಭದ ಪ್ರಮಾಣ ಅಗಾಧ, ಇದರಿಂದ ಬೆಳೆದವರಿಗೆ ಅರ್ಥಿಕ ಚೇತರಿಕೆಯೊಂದಿಗೆ,  ಕಳೆದುಕೊಂಡ ಗಂಧವನ್ನು ಪುನಃ ಪಡೆಯ ಬಹುದಾಗಿದೆ
( ದಿ 22-3-10  ಪ್ರಜಾವಾಣಿ ದಿನ  ಪತ್ರಿಕೆಯಲ್ಲಿ ಪ್ರಕಟವಾದ ಲೇಖನ )